ಉಪವಾಸ ಸತ್ಯಾಗ್ರಹ ಕೂತ ಪಾಲಿಕೆ ಸದಸ್ಯ

Published on

ಬಳ್ಳಾರಿ : ಕೇಂದ್ರ ಮತ್ತು ರಾಜ್ಯ ಸರ್ಕಾರದ ಶೇ 50:50 ಅನುಪಾತದ ಮಹಾತ್ಮಾಗಾಂಧಿ ವಿಕಾಸ ಯೋಜನೆಯ ಅನುದಾನ ಹಂಚಿಕೆಯಲ್ಲಿ ಪಾಲಿಕೆಯ ಅಧಿಕಾರಿಗಳು 25ನೇ ವಾರ್ಡ್‌ಗೆ ತಾರತಮ್ಯ ಮಾಡಿರುವುದನ್ನು ಖಂಡಿಸಿ, ಇಲ್ಲಿನ ಇನ್‌ಫ್ಯಾಂಟರಿ ರಸ್ತೆಯಲ್ಲಿ 25ನೇ ವಾರ್ಡ್ ಸದಸ್ಯ ಎಂ.ಗೋವಿಂದರಾಜುಲು ಗುರುವಾರ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಬಳಿಕ ಸದಸ್ಯ ಎಂ.ಗೋವಿಂದರಾಜುಲು ಮಾತನಾಡಿ, ಜಿಲ್ಲೆಯ 39 ವಾರ್ಡ್‌ಗಳ ಪೈಕಿ ಮಹಾನಗರ ಪಾಲಿಕೆಗೆ 25ನೇ ವಾರ್ಡ್ ಹೆಚ್ಚಿನ ಅದಾಯ ಒದಗಿಸುತ್ತಿದೆ. ಆದರೆ, ಮಹಾತ್ಮಗಾಂಧಿ ವಿಕಾಸ ಯೋಜನೆಯಡಿ ಬಳ್ಳಾರಿ ಮಹಾನಗರ ಪಾಲಿಕೆಗೆ 127 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. 40 ಕೋಟಿ ರೂ. ಗಳನ್ನು ಕೌಲ್ಬಜಾರ್ ಪ್ರದೇಶಕ್ಕೆ ಬಿಡುಗಡೆ ಮಾಡಲಾಗಿದೆ. ಆದರೆ, 75 ಲಕ್ಷ ರೂ. ಗಳನ್ನು 25, 26, 27 ನೇ ವಾರ್ಡ್‌ಗಳ ವ್ಯಾಪ್ತಿಗೆ ಸೇರಿದ ಒಂದು ಕಾಮಗಾರಿಗೆ ಅನುದಾನ ನೀಡಿದೆ. ಬಿಟ್ಟರೆ ನಮ್ಮ ವಾರ್ಡ್ ಅಭಿವೃದ್ಧಿಗೆ ಹಣ ನೀಡಿಲ್ಲ. ಇದು ನಮ್ಮ ವಾರ್ಡ್ ಜನತೆಗೆ ಮಾಡಿದ ಅನ್ಯಾಯವಾಗಿದೆ. ಅದಕ್ಕಾಗಿ ನಮ್ಮ ವಾರ್ಡ್‌ನ ಅಭಿವೃದ್ಧಿಗೆ ಸಮಾನ ರೀತಿಯಲ್ಲಿ ಹಂಚಿಕೆಯಾಗುವವರೆಗೂ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿದರು.

ಪಾಲಿಕೆ ಸದಸ್ಯರ ಹೋರಾಟಕ್ಕೆ ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಹಾಗೂ ಪಾಲಿಕೆಯ ಬಿಜೆಪಿ 12 ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿ ಬೆಂಬಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net