

ಮಂಡ್ಯ: ನೀರಾವರಿ ಇಲಾಖೆಯ ಕೈಪಿಡಿಯಂತೆ ಹುದ್ದೆವಾರು ವೇತನ ನೀಡುವುದು ಮತ್ತು ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವಂತೆ ರಾಜ್ಯ ಗುತ್ತಿಗೆ ಕಾರ್ಮಿಕರ ಸಲಹಾ ಮಂಡಳಿ ಸದಸ್ಯ ಪಂಪಾಪತಿ ರಾಟಿ ಒತ್ತಾಯಿಸಿದರು.
ರಾಜ್ಯದ ಜನಸಂಪನ್ಮೂಲ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರನ್ನು ನೀರಾವರಿ ಕೈಪಿಡಿಯಲ್ಲಿರುವ ಹುದ್ದೆಗಳಿಗೆ ಅನುಗುಣವಾಗಿ ನೇಮಿಸಿಕೊಂಡು ಗುತ್ತಿಗೆದಾರರ ಮೂಲಕ ವೇತನವನ್ನು ಪಾವತಿಸಲಾಗುತ್ತಿದೆ. ಗುತ್ತಿಗೆ ಕಾರ್ಮಿಕರ ನಿಯಂತ್ರಣ ಹಾಗೂ ರದ್ಧತಿ ಕಾಯ್ದೆಯಂತೆ ಯಾವುದೇ ಅವಶ್ಯಕ ಹುದ್ದೆಯಲ್ಲಿ ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳಬಾರದು. ಈ ಕೆಲಸಕ್ಕೆ ಮಾನವ ಸಂಪನ್ಮೂಲ ಸರಬರಾಜು ಮಾಡುವ ಗುತ್ತಿಗೆದಾರನೂ ಕಾಯ್ದೆಯಂತೆ ನೆಪಮಾತ್ರಕ್ಕಷ್ಟೇ ಇರುತ್ತಾನೆ. ಆದ್ದರಿಂದ ಇಲಾಖೆಯ ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ರದ್ದುಗೊಳಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ವಿವಿಧ ನಿಗಮಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಭವಿಷ್ಯನಿಧಿ, ಇಎಸ್‌ಐ ಮತ್ತು ಕನಿಷ್ಟ ಸೌಲಭ್ಯಗಳಿಂದ ಕಾರ್ಮಿಕರು ವಂಚಿತರಾಗಿದ್ದಾರೆ. ಕಾರ್ಮಿಕರಿಗೆ ನ್ಯಾಯಸಮ್ಮತ ಸೌಲಭ್ಯಗಳನ್ನು ಒದಗಿಸಬೇಕು. ಗುತ್ತಿಗೆದಾರರು ಇಎಸ್‌ಐ, ಪಿಫ್ ಹಣವನ್ನು ವರ್ಗಾಯಿಸಿಲ್ಲ. ಕಾರ್ಮಿಕರ ಖಾತೆ ಸಂಖ್ಯೆಗಳಿಗೆ ವರ್ಗಾಯಿಸಲು ಅನುಮತಿ ನೀಡುವವರೆಗೂ ಮೂಲ ಮಾಲೀಕರು ಅವರಿಗೆ ಯಾವುದೇ ದಾಖಲಾತಿ ಇಎಂಡಿ ಹಣ ಮತ್ತು ಇನ್ನಿತರೆ ಹಣವನ್ನು ನೀಡಬಾರದು. ವಾರದ ರಜೆ, ರಾಷ್ಟ್ರೀಯ ರಜೆ ದಿನಗಳು ಹಾಗೂ ಹೆಚ್ಚಿನ ಅವಧಿ ಕೆಲಸ ನಿರ್ವಹಿಸಿದ್ದಲ್ಲಿ ವೇತವನ್ನು ಕಡ್ಡಾಯವಾಗಿ ನೀಡಬೇಕು. ಗುತ್ತಿಗೆ ಕಾರ್ಮಿಕ ಕಾಯ್ದೆಯಂತೆ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ಹಾಗೂ ವೇತನ ಪಾವತಿಸುವ ರಶೀದಿಯನ್ನು ನೀಡಬೇಕು. ಪ್ರತಿ ತಿಂಗಳು 7ನೇ ತಾರೀಖಿನೊಳಗೆ ವೇತನ ಪಾವತಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಶಿವಲಿಂಗಯ್ಯ, ಮಹೇಶ, ಶ್ರೆನಿವಾಸ್ ಇತರರಿದ್ದರು.