

ಮೇಲುಕೋಟೆ: ಭೂವೈಕುಂಠ ಮೇಲುಕೋಟೆಯ ಚೆಲುವನಾರಾಯಣಸ್ವಾಮಿಯ ದಿವ್ಯಕ್ಷೇತ್ರದಲ್ಲಿ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡುವುದಾಗಿ ಗಾಯಕ ಹಾಗೂ ಸಂಗೀತ ನಿರ್ದೇಶಕ ವಿಜಯಪ್ರಕಾಶ್ ಸಂಕಲ್ಪ ಮಾಡಿದರು.
ವೈರಮುಡಿ ಬ್ರಹ್ಮೋತ್ಸವದ ಮಹಾಭಿಷೇಕದ ದರ್ಶನಕ್ಕೆ ಅನಿರೀಕ್ಷತವಾಗಿ ಪತ್ನಿಮಹತಿಯವರೊಂದಿಗೆ ಆಗಮಿಸಿ ವೇದ ಮಂತ್ರಗಳೊಂದಿಗೆ ವೈಭವದಿಂದ ನಡೆಯುತ್ತಿದ್ದ ಚೆಲ್ವತಿರುನಾರಾಯಣಸ್ವಾಮಿ ಅಭಿಷೇಕ ದರ್ಶನ ಮಾಡಿದರು. ನಂತರ ಸಾಕ್ಷಾತ್ ರಾಮಾನುಜರೇ ಭಿಕ್ಷೆ ಸ್ವೀಕರಿಸಿದ ಮಹತ್ವವಿರುವ ಯತಿರಾಜದಾಸರ್ ಗುರುಪೀಠಕ್ಕೆ ಭೇಟಿ ನೀಡಿ ದರ್ಶನದ ಬಗ್ಗೆ ತಮ್ಮ ಸಂತಸ ಹಂಚಿಕೊಂಡರು. ಮೇಲುಕೋಟೆಯ ಚೆಲುವನಾರಾಯಣಸ್ವಾಮಿಯ ವೈಭವದ ಬಗ್ಗೆ ಕೇಳಿದ್ದೆ. ಹಲವು ಸಲ ಕ್ಷೇತ್ರಕ್ಕೆ ಬರುಬೇಕೆಂದು ಕೊಂಡರೂ ಆಗುತ್ತಿರಲಿಲ್ಲ. ಈ ದಿನ ಮಹಾಭಿಷೇಕ ಇರುವುದು ನನಗೆ ತಿಳಿದಿರಲಿಲ್ಲ. ಕೇವಲ ದರ್ಶನ ಮಾಡುವ ಸಲುವಾಗಿ ಬಂದಿದ್ದೆ. ಆದರೆ ಮಹಾಭಿಷೇಕದ ದಿನವೇ ಚೆಲುವನಾರಾಯಣನ ಮಂಗಳರೂಪ ದರ್ಶನ ಮಾಡಿದ್ದು, ನನ್ನ ಪೂರ್ವಜನ್ಮದ ಪುಣ್ಯವಾಗಿದೆ. ಇಂದು ನಾನು ಮಾಡಿದ ಸ್ವಾಮಿಯ ದರ್ಶನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ರಾಮಾನುಜರ ಕರ್ಮಭೂಮಿ ಮೇಲುಕೋಟೆಯ ಅಭಿವೃದ್ಧಿಗೆ ನನ್ನ ಕೈಲಾದ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಯತಿರಾಜದಾಸರ್ ಗುರುಪೀಠದೊಂದಿಗೆ ಸಂಪರ್ಕದಲ್ಲಿರುತ್ತೇನೆ ಎಂದರು.
ಇದಕ್ಕೂ ಮೊದಲು ಇತಿಹಾಸ ತಜ್ಞ ಪ್ರೊ.ಶಲ್ವಪ್ಪಿಳ್ಳೆ ಅಯ್ಯಂಗಾರ್ ಹಾಜರಿದ್ದು, ವಿಯಪ್ರಕಾಶ್‌ಗೆ ದೇವರ ದರ್ಶನ ಮಾಡಿಸುವ ಜತೆಗೆ ಮೇಲುಕೋಟೆಯ ಇತಿಹಾಸ ಪರಂಪರೆ ಸಂಸ್ಕೃತಿಯ ಬಗ್ಗೆ ಮಾಹಿತಿ ನೀಡಿ, ಮೇಲುಕೋಟೆ ಅಧಿದೈವ ಚೆಲುವನಾರಾಯಣನ ಬಗ್ಗೆ ಭಕ್ತಿ ಸಂಗೀತ ಗುಚ್ಛ ತಯಾರಿಸುವ ಜತೆಗೆ ಮೇಲು ಕೋಟೆಯಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ ನೀಡುವಂತೆ ಕೋರಿದರು.
ಸಂಗೀತ ಕಾರ್ಯಕ್ರಮ ನಡೆಸಲು ನಾನು ಸದಾ ಸಿದ್ಧನಿದ್ದೇನೆ ಎಂದು ವಿಜಯಪ್ರಕಾಶ್ ಸಮ್ಮತಿ ಸೂಚಿಸಿದರು. ಯತಿರಾಜದಾಸರ್ ಗುರುಪೀಠದ ಗುರುಕುಲದ ಮಕ್ಕಳಿಂದ ವೇದಮಂತ್ರ ಹಾಗೂ ಸ್ತ್ರೋತ್ರಗಳನ್ನು ಹೇಳಿಸಿ ಪ್ರೋತ್ಸಾಹಿಸಿದರು.
ಇದೇ ವೇಳೆ ಯತಿರಾಜದಾಸರ್ ಗುರುಪೀಠದ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್‌ಗುರೂಜಿ ವಿಜಯಪ್ರಕಾಶ್ ಮಹತಿ ದಂಪತಿಯನ್ನು ವೇದ ಮಂತ್ರದ ಆಶೀರ್ವಾದಗಳೊಂದಿಗೆ ಭಗವಂತನ ಸ್ಮರಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಸ್ಥಾನೀಕಂ ಸಂತಾನರಾಮನ್ ಲೇಖಕಿ ಯಶೋದ ಪ್ರಸಾದ್, ಪತ್ರಕರ್ತೆಯರಾದ ಸೌಮ್ಯಾ ಸಂತಾನಂ, ಶಾಲಿನಿ ಸಿಂಹ, ಅನುರಾಧಾ ಉಪಸ್ಥಿತರಿದ್ದು, ಮೇಲುಕೋಟೆಯ ವಿಶೇಷ ಪ್ರಸಾದಗಳಾದ ಮನೋಹರ, ಸಕ್ಕರೆ ಪೊಂಗಲ್, ಪುಳಿಯೋಗರೆಯ ಆತಿಥ್ಯ ನೀಡಿದರು.