ಮಾ.27ರಿಂದ ವೈರಮುಡಿ ಬ್ರಹ್ಮೋತ್ಸವ: ಡಿಸಿ ಡಾ.ಎಚ್.ಎನ್‌ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆ

Dc Meeting
Published on

ಮಂಡ್ಯ: ವಿಶ್ವವಿಖ್ಯಾತ ಮೇಲುಕೋಟೆಯ ಚಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವವು ಮಾ.27 ರಿಂದ ಏ.8ರವರೆಗೆ ನಡೆಯಲಿದೆ. ಆದ್ದರಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯಬೇಕು. ಏ. 1ರಂದು ವೈರಮುಡಿ ಕಿರೀಟ ಧಾರಣೆ ಮಹೋತ್ಸವಕ್ಕೆ ಕಿರೀಟವನ್ನು ಜಿಲ್ಲಾ ಖಜಾನೆಯಿಂದ ಮೇಲುಕೋಟೆಗೆ ತೆಗೆದುಕೊಂಡು ಹೋಗುವಾಗ ಮಾರ್ಗದಲ್ಲಿ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾರೆ. ಇದಕ್ಕೆ ಸೂಕ್ತ ರೂಟ್‌ಮ್ಯಾಪ್ ಹಾಗೂ ಭದ್ರತಾ ವ್ಯವಸ್ಥೆಯಾಗಬೇಕು ಎಂದು ತಿಳಿಸಿದರು.

ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ಹೆಚ್ಚು ಜನ ಸೇರುವ ವಾಹನ ಪಾರ್ಕಿಂಗ್ ಸ್ಥಳ, ದೇವಸ್ಥಾನದ ಹತ್ತಿರ ಕುಡಿಯುವ ನೀರಿನ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಿ. ನೀರನ್ನು ಪ್ರತಿದಿನ ಪರೀಕ್ಷೆಗೆ ಒಳಪಡಿಸಿ. ಆರೋಗ್ಯ ಇಲಾಖೆ ವತಿಯಿಂದ ಆಂಬುಲೆನ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿ ನಿಯೋಜನೆಯಾಗಬೇಕು. ಕೊಳದ ಹತ್ತಿರ ನುರಿತ ಈಜುಗಾರರನ್ನು ನಿಯೋಜಿಸಬೇಕು. ಮೇಲುಕೋಟೆಯ ಮುಖ್ಯ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಭಕ್ತರ ಸಂಖ್ಯೆಗೆ ತಕ್ಕಂತೆ ಸಾರಿಗೆ ವ್ಯವಸ್ಥೆಯಾಗಬೇಕು. ಸಿಸಿ ಕ್ಯಾಮರಾ, ನಿರಂತರ ವಿದ್ಯುತ್ ಸರಬರಾಜು ಹಾಗೂ ದೀಪಾಲಂಕಾರ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಮೇಲುಕೋಟೆಯ ದಾಸೋಹ ಭವನದಲ್ಲಿ ಹೆಚ್ಚಿನ ಭಕ್ತರು ಬರುವ ದಿನಗಳಂದು ದಾಸೋಹದ ವ್ಯವಸ್ಥೆ ಮಾಡಬೇಕು. ವಾಹನ ಪಾರ್ಕಿಂಗ್ ಸ್ಥಳವನ್ನು ಸಮತಟ್ಟಾಗಿ ಯಾವುದೇ ಸಮಸ್ಯೆಯಾಗದಂತೆ ಸಿದ್ಧಪಡಿಸಿ. ಜತೆಗೆ ಸ್ಥಳದಲ್ಲಿ ವಿದ್ಯುತ್ ದೀಪ (ಫೋಕಸ್ ಲೈಟ್) ವ್ಯವಸ್ಥೆ ಮಾಡಿ. ಭಕ್ತರಿಗೆ ಗೋಚರಿಸುವಂತೆ ವ್ಯವಸ್ಥೆಗಳ ಬಗ್ಗೆ ಸೂಚನಾ ಪಲಕಗಳನ್ನು ಅಳವಡಿಸಿ ಎಂದು ಸೂಚನೆ ನೀಡಿದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಭಕ್ತರಿಗೆ ಅನುಕೂಲವಾಗುವಂತೆ ನಾಲ್ಕರಿಂದ ಐದು ಕಡೆ ತಾತ್ಕಾಲಿಕ ಶೌಚಗೃಹ ಅಳವಡಿಸಬೇಕು. ತಾತ್ಕಾಲಿಕ ಶೌಚಗೃಹ ಬಾಡಿಗೆ ಆಧಾರದ ಮೇಲೆ ಅಳವಡಿಸಲು ಹೆಚ್ಚಿನ ವೆಚ್ಚವಾದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಇರುವ ಸಮಯದಲ್ಲೇ ಶಾಶ್ವತವಾಗಿ ಸ್ಥಳಗಳನ್ನು ಗುರುತಿಸಿ ನಿರ್ಮಾಣ ಮಾಡಿ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್, ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ ಐಶ್ವರ್ಯಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಮುಜರಾಯಿ ತಹಸೀಲ್ದಾರ್ ಉಮಾ, ದೇವಸ್ಥಾನದ ಅರ್ಚಕ ಕೃಷ್ಣ ಅಯ್ಯಂಗಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net