

ಮಂಡ್ಯ: ಮಾ.16 ರಿಂದ 28ರವರೆಗೆ ನಡೆಯುವ ವೈರಮುಡಿ ಬ್ರಹ್ಮೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚಿಸಿದರು.
ಮೇಲುಕೋಟೆಯ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾ.21ರಂದು ವೈರಮುಡಿ ಉತ್ಸವ ನಡೆಯಲಿದ್ದು, 2ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸಲಿದ್ದಾರೆ. ಈ ವೇಳೆ ಭಕ್ತರಿಗೆ ಶುದ್ಧ ಕುಡಿಯುವ ನೀರು, ಉತ್ತಮ ಶೌಚಗೃಹ, ವಾಹನ ನಿಲುಗಡೆಗೆ ವ್ಯವಸ್ಥಿತ ಸ್ಥಳ, ವಿದ್ಯುತ್‌ದೀಪ, ಕಲ್ಯಾಣಿಗಳ ಸ್ವಚ್ಛತೆ, ತುರ್ತು ಆರೋಗ್ಯ ಸೇವೆ, ಪೊಲೀಸ್ ಬಂದೋಬಸ್ತ್ ಆಗಬೇಕು ಎಂದರು.
ಮಂಡ್ಯ-ಜಕ್ಕನಹಳ್ಳಿಯ ರಸ್ತೆ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮೇಲುಕೋಟೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಮತ್ತು ಮೇಲುಕೋಟೆಯಲ್ಲಿನ ರಸ್ತೆಗಳು ಮಾ.15ರೊಳಗೆ ದುರಸ್ತಿಯಾಗಬೇಕು. ಹೆಚ್ಚಿನ ಸಾರಿಗೆ ಬಸ್ ವ್ಯವಸ್ಥೆಯಾಗಬೇಕು. ಪ್ರವಾಸಿ ಮಂದಿರದ ಬಳಿಯಿಂದ ದೇವಸ್ಥಾನದವರೆಗೆ ವಯಸ್ಸಾದ ಭಕ್ತರಿಗೆ ಉಚಿತ ಬಸ್ ಅಥವಾ ಮಿನಿ ಬಸ್ ವ್ಯವಸ್ಥೆಯಾಗಬೇಕು. ಯಾವುದೇ ಭಕ್ತರು ಬೀದಿಯಲ್ಲಿ ಮಲಗಬಾರದು ಎಂಬ ಆಶಯ ನನ್ನದಾಗಿದ್ದು ಜರ್ಮನ್ ಟೆಂಟ್ ನಿರ್ಮಿಸಲಾಗುತ್ತದೆ ಎಂದರು.
ವೈರಮುಡಿಯ ಬ್ರಹ್ಮೋತ್ಸವ, ಶನಿವಾರ ಹಾಗೂ ಭಾನುವಾರದಂದು ಉತ್ಸವ ಬೀದಿಗಳಲ್ಲಿ ಪಾರ್ಕಿಂಗ್‌ಗೆ ಪೊಲೀಸರು ಅವಕಾಶ ನೀಡಬಾರದು. ದೇವಸ್ಥಾನದ ಸುತ್ತ ಶಾಶ್ವತ ಕಸದ ತೊಟ್ಟಿಗಳನ್ನು ಗ್ರಾಪಂಯಿಂದ ವ್ಯವಸ್ಥೆ ಮಾಡಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಪೊಲೀಸ್ ಠಾಣೆಯನ್ನು ಪ್ರವಾಸಿಮಂದಿರದ ಬಳಿಯಿರುವ ಜಿಲ್ಲಾ ಪಂಚಾಯಿತಿ ವಸತಿಗೃಹಕ್ಕೆ ವರ್ಗಾಯಿಸಲಾಗುತ್ತಿದೆ. ಜಮೀನಿನಲ್ಲಿರುವ ನೀಲಗಿರಿ ಮರಗಳನ್ನು ತೆರವು ಮಾಡಿಸಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ದಾನಿಗಳು ಕುಡಿಯುವ ನೀರಿನ ವ್ಯವಸ್ಥೆ ಮಾಡಲಿ: ವೈರಮುಡಿ ದಿನದಂದು ಭಕ್ತರಿಗೆ ದಾನಿಗಳು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮನವಿ ಮಾಡಿದರು.
ಮಾ.21 ರಂದು ಚಲುವರಾಯಸ್ವಾಮಿ ವೈರಮುಡಿ-ರಾಜಮುಡಿ ತಿರುವಾಭರಗಳನ್ನು ಜಿಲ್ಲಾ ಖಜಾನೆಯಿಂದ ದೇವಸ್ಥಾನದವರಿಗೆ ಹಸ್ತಾಂತರ ಮಾಡಲಾಗುವುದು. ವೈರಮುಡಿ ತೆಗೆದುಕೊಂಡು ಹೋಗುವ ಲಕ್ಷ್ಮಿ ಜರ್ನಾದನ ದೇವಸ್ಥಾನ, ಕಿರಂಗೂರು, ದರಸಕುಪ್ಪೆ, ಜಕ್ಕನಹಳ್ಳಿಕ್ರಾಸ್ ಮುಂತಾದ ಸ್ಥಳಗಳಲ್ಲಿ ಪೂಜೆ ಸಲ್ಲಿಸಲಾಗುವುದು. ದಾನಿಗಳು ಪೂಜೆ ಸಲ್ಲಿಸುವ ಸ್ಥಳಗಳಲ್ಲಿ ಕುಡಿಯುವ ನೀರು, ಮಜ್ಜಿಗೆ ಹಾಗೂ ಪ್ರಸಾದದ ವ್ಯವಸ್ಥೆ ಮಾಡಬೇಕು ಎಂದರು.
ಅನ್ನದಾನ ನಿಧಿಗೆ ಪ್ರತ್ಯೇಕ ಖಾತೆ: ಭಕ್ತರಿಗೆ ಅನ್ನದಾನದ ವ್ಯವಸ್ಥೆ ಮಾಡಲು ದಾನಿಗಳಿಂದ ಹಣ ಸಂಗ್ರಹಿಸಲು ಪ್ರತ್ಯೇಕ ಖಾತೆ ಪ್ರಾರಂಭಿಸಲಾಗಿದೆ. ದಾನಿಗಳು ದೇವಸ್ಥಾನದ ಇಒ ಕಚೇರಿಗೆ ಹಣ ಜಮೆ ಮಾಡಿ ರಸೀದಿ ಪಡೆದುಕೊಳ್ಳಬಹುದು ಎಂದರು.
ಮೇಲುಕೋಟೆ ದೇವಸ್ಥಾನದ ಸುತ್ತ 500 ಮೀ. ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನದ ಮಾಲೀಕರು ತಮ್ಮ ನಿವೇಶನವನ್ನು ಸ್ವಚ್ಛವಾಗಿಟ್ಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ನೋಟಿಸ್ ಜಾರಿ ಮಾಡಿ ಗ್ರಾಮ ಪಂಚಾಯಿತಿಯಿಂದ ಸ್ವಚ್ಛತೆ ಮಾಡಿಸಿ ಸ್ವಚ್ಛತೆಯ ಶುಲ್ಕ ವಸೂಲು ಮಾಡಲಾಗುವುದು ಎಂದರು.
ಸಭೆಯಲ್ಲಿ ದೇವಸ್ಥಾನದ ಸ್ಥಾನಿಕರಾದ ಶ್ರೀನಿವಾಸನರಸಿಂಹನ್ ಗುರೂಜಿ, ಕರಗಂರಾಮಪ್ರಿಯ, ರಾಮಾನುಜರ ಸನ್ನಿಧಿ ಅರ್ಚಕ ಆನಂದಾಳ್ವಾರ್ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್. ಡಿಒಎಸ್‌ಪಿ ಮುರಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ್, ಪಾಂಡವಪುರ ತಹಸೀಲ್ದಾರ್ ಶ್ರೇಯಸ್, ಮುಜರಾಯಿ ತಹಸೀಲ್ದಾರ್ ತಮ್ಮೇಗೌಡ ಇತರರಿದ್ದರು.