

ಜನಮನ ಸೆಳೆದ ಜಾನಪದ ಕಲಾರಾಧನೆ
ಮೇಲುಕೋಟೆ : ಚೆಲುವನಾರಾಯಣಸ್ವಾಮಿಯ ರಥಸಪ್ತಮಿ ಮಹೋತ್ಸವ ಅಂಗವಾಗಿ ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ ಮಂಗಳವಾರ ಏರ್ಪಡಿಸಿದ್ದ 26ನೇ ವರ್ಷದ ಜಾನಪದ ಕಲಾರಾಧನೆ ಸೇವೆ ಸಂಭ್ರಮ ದಿಂದ ನೆರವೇರಿತು.ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ದಂಪತಿ ಸಮೇತ ಕಲಾ ಮೇಳಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮಕ್ಕಳಹಕ್ಕುಗಳ ರಕ್ಷಣಾಆಯೋಗದ ಅಧ್ಯಕ್ಷ ನಾಗಣ್ಣಗೌಡ ಸೂರ್ಯ ಮಂಡಲವಾಹನೋತ್ಸವದ ತೆರು ಎಳೆಯುವ ಮೂಲಕ ರಥಸಪ್ತಮಿಗೆ ಚಾಲನೆ ನೀಡಿದರು. ಇದಕ್ಕೂ ಮೊದಲು ಕಲಾಮೇಳದಲ್ಲಿ ಪಾಲ್ಗೊಂಡಿದ್ದ 600ಕ್ಕೂ ಹೆಚ್ಚು ಕಲಾವಿದರು 4 ತಾಸುಗಳ ಕಾಲ ಚೆಲುವನಾರಾಯಣಸ್ವಾಮಿಗೆ ಕಲಾರಾಧನೆ ಸೇವೆ ಮಾಡಿದರು.
ಉತ್ಸವ ಬೀದಿಯೇ ವೇದಿಕೆ: ಮೇಲುಕೋಟೆಯ ಉತ್ಸವಬೀದಿಗಳೇ ಕಲಾವಿದರಿಗೆ ವೇದಿಕೆಯಾಗಿದ್ದು ಗಮನ ಸೆಳೆಯಿತು. ದೇವಾಲಯದ ಸುತ್ತ ನಡೆದ ಜಾನಪದ ಜಾತ್ರೆಯಲ್ಲಿ ತಮಟೆ, ನಗಾರಿ, ಚಂಡೆಗಳ ನೀನಾದ ಮುಗಿಲು ಮುಟ್ಟಿತ್ತು. ಗಾರುಡಿ ಗೊಂಬೆಗಳ ನರ್ತನ ನೋಡುಗರನ್ನು ಜಾನಪದ ಲೋಕದ ದರ್ಶನ ಮಾಡಿಸಿತು. ಕೇರಳದ ಚೆಂಡೆಮೇಳ, ಚಿಲಿಪಿಲಿಗೊಂಬೆ, ಕೊತ್ತತ್ತಿಯ ಮರಗಾಲು ಕುಣಿತ, ಚಿಕ್ಕಮಗಳೂರಿನ ಹುಲಿವೇಷ, ಕರಗದ ನೃತ್ಯ, ಮೈಸೂರು ನಗಾರಿ, ಹುಬ್ಬಳ್ಳಿಯ ಜಗ್ಗಲಿಕೆ ಮೇಳ ನಾಸಿಕ್‌ಡೋಲು, ಕರಡಿ ಮಜಲು, ನಂದಿಕಂಬ, ಪಟ ಕುಣಿತ. ವೀರಗಾಸೆ. ಕೋಲಾಟ, ಡೊಳ್ಳುಕುಣಿತ, ಜಾಂಜ್ ಮೇಳ, ಸೋಮನ ಕುಣಿತ. ಚಕ್ರಾದಿ ಬಳೆ, ಖಡ್ಗ ಪವಾಡ, ವೀರಭದ್ರನ ಕುಣಿತ ಶಾಲಾಮಕ್ಕಳ 101ಕಳಶ, ವೀರ ಮಕ್ಕಳ ಕುಣಿತ, ಕಂಸಾಳೆ, ನಾದಸ್ವರ, ಮಹಿಳಾ ತಂಡದ ಡೊಳ್ಳು, ಯಕ್ಷಗಾನ ಸೇರಿದಂತೆ ಗ್ರಾಮೀಣ ಸಂಸ್ಕೃತಿ ಅನಾವರಣಗೊಳಿಸುವ ವಿವಿಧ ಕಲಾಪ್ರಕಾರಗಳು ಜನರ ಹೃನ್ಮನ ಸೆಳೆದವು. ಈ ವರ್ಷದ ಕಲಾಮೇಳದಲ್ಲಿ ಮಹಿಳಾ ಕಲಾತಂಡಗಳು( 200ಕ್ಕೂ ಹೆಚ್ಚು ಕಲಾವಿದೆಯರು) ಭಾಗಹಿಸಿದ್ದು ವಿಶೇಷವಾಗಿತ್ತು. ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಇಸ್ರೋವಿಜ್ಞಾನಿ ಡಾ. ಶ್ರೀನಾಥ, ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ, ತಹಸೀಲ್ದಾರ್ ಸಂತೋಷ್, ಮೇಳದ ಸಂಘಟಕರಾದ ಸೌಮ್ಯಾ, ಕದಲಗೆರೆ ಶಿವಣ್ಣಗೌಡ, ಇತಿಹಾಸ ತಜ್ಞ ಪ್ರೊ. ಶೆಲ್ವಪಿಳ್ಳೆ ಅಯ್ಯಂಗಾರ್, ದೇವಾಲಯದ ಇಒ ಶೀಲಾ ಇತರರು ಇದ್ದರು.