

ಮೇಲುಕೋಟೆ : ಶಿಕ್ಷಕರು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಿ ಸರ್ಕಾರಿ ಶಾಲೆಗಳನ್ನು ಉಳಿಸಲು ಮುಂದಾಗಬೇಕು ಎಂದು ಮಂಡ್ಯ ಜಿಲ್ಲಾ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯಕುಮಾರ್ ಹೇಳಿದರು. ಅವರು ಮೇಲುಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಮಹಮದ್ ಇಮ್ರಾನ್‌ಗೆ ಶನಿವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.ಶಾಲೆಗಳ ಬಲವರ್ಧನೆಗೆ ಸರ್ಕಾರ ಸಾಕಷ್ಟು ಸೌಲಭ್ಯ ನೀಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಅತ್ಯಂತ ಸಮರ್ಥ ಶಿಕ್ಷಕರಿದ್ದಾರೆ. ಗುಣಾತ್ಮಕ ಶಿಕ್ಷಣವೂ ಇಲ್ಲಿ ಲಭ್ಯವಿದೆ. ಆದರೂ ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ರೂಢಿಸಿಕೊಂಡಿರುವುದು ಸೂಕ್ತವಲ್ಲ ಎಂದರು.
ಪ್ರಸಕ್ತ ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಗಣನೀಯವಾಗಿ ಕಡಿಮೆಯಾಗಿದೆ. ಶಿಕ್ಷಕರು ಸರ್ಕಾರದ ಸೌಲಭ್ಯ, ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಗ್ರಾಮೀಣ ಭಾಗದ ಪಾಲಕರಿಗೆ ಸೂಕ್ತ ಮಾಹಿತಿ ನೀಡಬೇಕು. ಸರ್ಕಾರಿ ಶಾಲೆಗಳ ದಾಖಲಾತಿ, ಹಾಜರಾತಿ ಹೆಚ್ಚಾಗಲು ಪ್ರೇರೇಪಿಸಬೇಕು ಎಂದರು.
ಭಾಗ್ಯ ದೊರಕಿದೆ: ಅಭಿನಂದನೆ ಸ್ವೀಕರಿಸಿ ಮಾತನಾಡಿದ ದೈಹಿಕ ಶಿಕ್ಷಣ ಶಿಕ್ಷಕ ಮಹಮದ್ ಇಮ್ರಾನ್, ಖ್ಯಾತ ಕವಿ ಪುತಿನ ಅವರು ವ್ಯಾಸಂಗಮಾಡಿದ, ಶತಮಾನ ಕಂಡ ಶಾಲೆಯಲ್ಲಿ 5 ವರ್ಷ ಪಾಠ ಮಾಡುವ ಭಾಗ್ಯ ಸಿಕ್ಕಿದ್ದು ಧನ್ಯತೆ ಮೂಡಿಸಿದೆ ಎಂದರು. ಪಿಎಂಶ್ರೀ ಯೋಜನೆ ಅನುಷ್ಠಾನದಲ್ಲಿರುವ ಬೆಳ್ಳೂರು ಬಾಲಕಿಯರ ಸರ್ಕಾರಿ ಶಾಲೆಯಲ್ಲಿ ಕರ್ತವ್ಯನಿರ್ವಹಿಸಲು ಅವಕಾಶ ದೊರೆತಿದೆ. ಅಲ್ಲಿಯೂ ಕ್ರಿಯಾಶೀಲವಾಗಿ ಕರ್ತವ್ಯನಿರ್ವಹಿಸುವೆ ಎಂದರು.
ಬಾಲಕರ ಶಾಲೆಯ ಮುಖ್ಯಶಿಕ್ಷಕ ಸಂತಾನ ರಾಮನ್, ಬಾಲಕಿಯರ ಶಾಲೆ ಮುಖ್ಯಶಿಕ್ಷಕ ಮಂಜುನಾಥ್, ಅಮೃತಿ ಶಾಲೆಯ ಶಿಕ್ಷಕ ಮುತ್ತುರಾಜ್, ಸಹ ಶಿಕ್ಷಕರಾದ ಮಹಾಲಕ್ಷ್ಮೀ, ಜಯಂತಿ, ಶ್ರುತಿ, ಪೂರ್ಣಿಮಾ, ಗಿರಿಜಾ ಇದ್ದರು. ವರ್ಗಾವಣೆಗೊಂಡ ಶಿಕ್ಷಕ ಇಮ್ರಾನ್‌ಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.