ಅಯೋಧ್ಯೆಯಲ್ಲಿ ಮೇಲುಕೋಟೆ ನಾದಸ್ವರ

4mlk1
Published on

ಮೇಲುಕೋಟೆ : ಪ್ರಖ್ಯಾತ ಧಾರ್ಮಿಕ ಕ್ಷೇತ್ರ ಮೇಲುಕೋಟೆ ಚೆಲುವನಾರಾಯಣಸ್ವಾಮಿ ಸನ್ನಿಧಿಯ ನಾದಸ್ವರ ವಿದ್ವಾಂಸರ ತಂಡ ರಾಮಜನ್ಮಭೂಮಿ ಅಯೋಧ್ಯೆಯ ಬಾಲರಾಮನ ದೇಗುಲದಲ್ಲೂ ನಾದಮಾಧುರ್ಯ ಹರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ದೇಗುಲ ಉದ್ಘಾಟಿಸಿದ ದಿನ ನಾದಕೈಂಕರ್ಯ ಆರಂಭಿಸಿರುವ ತಂಡ, ಮಂಡಲಪೂಜೆಯ 48 ದಿನಗಳ ಕಾಲ ಪ್ರತಿದಿನ ಸೇವೆ ಮಾಡುತ್ತಿದೆ.

ಮೇಲುಕೋಟೆಯ ನಾದಸ್ವರ ವಿದ್ವಾಂಸ ಎಂ.ಪಿ.ನಾಗರಾಜು ಮತ್ತು ಡೋಲು ವಿದ್ವಾನ್ ಅಶೋಕ್ ಅವರನ್ನು ಒಳಗೊಂಡ ನಾದಸ್ವರ ವಿದ್ವಾಂಸರ ತಂಡ ಅಲ್ಲಿನ ಉತ್ಸವ, ಶ್ರೀ ಬಾಲರಾಮನ ವಿಶೇಷ ಪೂಜೆ, ಸಹಸ್ರನಾಮ ಮಂಗಳಾರತಿಯ ವೇಳೆ ಸುಶ್ರಾವ್ಯವಾಗಿ ನಾದಸ್ವರ ನುಡಿಸುವ ಮೂಲಕ ಭಕ್ತರ ಹಾಗೂ ದೇವಾಲಯದ ಸಿಬ್ಬಂದಿಯ ಮನಸೂರೆಗೊಂಡಿದೆ. ಆಕಾಶವಾಣಿ, ದೂರದರ್ಶನದ ಕಲಾವಿದ ಮೇಲುಕೋಟೆಯ ನಾದಸ್ವರ ವಿದ್ವಾಂಸ ಪುಟ್ಟರಾಜು ಅವರ ಪುತ್ರ ಯುವ ನಾದಸ್ವರ ವಿದ್ವಾಂಸ ಎಂ.ಪಿ.ನಾಗರಾಜು, ಚೆಲುವನಾರಾಯಣನ ವೈರಮುಡಿ ಉತ್ಸವ, ರಾಮಾನುಜರ ಜಯಂತ್ಯುತ್ಸವ, ರಥಸಪ್ತಮಿ, ಅಂಗಮಣಿ ಮುಂತಾದ ಮೇಲುಕೋಟೆಯ ಪ್ರಖ್ಯಾತ ಉತ್ಸವಗಳಲ್ಲಿ ಮಾಡಿದ ನಾದಸ್ವರ ಸೇವೆಯನ್ನು ಪರಿಗಣಿಸಿ ಅಯೋಧ್ಯೆಯ ಬಾಲರಾಮನ ಸನ್ನಿಧಿಯಲ್ಲಿ ನಾದಸ್ವರ ಸೇವೆಗೆ ರಾಮಮಂದಿರ ನಿರ್ಮಾಣ ಟ್ರಸ್ಟ್ ಈ ಅವಕಾಶ ನೀಡಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು, ತ್ಯಾಗರಾಜರು ಇತರ ದಾರ್ಶನಿಕರು ರಚಿಸಿದ ಶ್ರೀರಾಮನ ಕೀರ್ತನೆಗಳನ್ನು ಸುಶ್ರಾವ್ಯವಾಗಿ ನುಡಿಸುತ್ತಿದ್ದಾರೆ.

ಬಾಲರಾಮನ ದೇಗುಲದ ಉದ್ಘಾಟನೆ ಹಾಗೂ ಮಂಡಲ ಪೂಜೆಯಲ್ಲಿ ನಾದಸ್ವರ ನುಡಿಸಲು ಅವಕಾಶ ಸಿಕ್ಕಿರುವುದು ನನಗೆ ಮತ್ತು ನಮ್ಮ ತಂಡಕ್ಕೆ ದೊರೆತಿರುವ ಸೌಭಾಗ್ಯವಾಗಿದೆ. ಶ್ರೀರಾಮನ ಆರಾಧ್ಯ ದೈವವಾದ ರಾಮಪ್ರಿಯ ಶ್ರೀ ಚೆಲುವನಾರಾಯಣಸ್ವಾಮಿಯ ಕೃಪೆಯಿಂದಲೇ ನಮಗೆ ಈ ಅವಕಾಶ ದೊರೆತಿದ್ದು, ಶ್ರೀರಾಮನ ಸೇವೆಯಲ್ಲಿ ನಿರತರಾಗಿದ್ದೇವೆ ಎಂದು ಎಂ.ಪಿ.ನಾಗರಾಜು ಸಂತಸ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net