ಕಿತ್ತೂರು ಚನ್ನಮ್ಮ ಜ್ಯೋತಿಗೆ ಗೌರವಾರ್ಪಣೆ

4mlk1
Published on


ಮೇಲುಕೋಟೆ: ಕಿತ್ತೂರಿನ ವೀರ ರಾಣಿ ಚನ್ನಮ್ಮ 200ನೇ ವಿಜಯೋತ್ಸವದ ಅಂಗವಾಗಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಿಂದ ಹಮ್ಮಿಕೊಂಡಿರುವ ‘ರಾಣಿ ಚನ್ನಮ್ಮನ ವಿಜಯಜ್ಯೋತಿ ರಥ’ ಇಲ್ಲಿನ ಚೆಲುವನಾರಾಯಣಸ್ವಾಮಿ ದೇವಾಲಯದ ಬಳಿ ಆಗಮಿಸಿದ ಸಂದರ್ಭ ಪುಷ್ಪಹಾರ ಅರ್ಪಿಸಿ ವಿಶೇಷಪೂಜೆ ಸಮರ್ಪಿಸಲಾಯಿತು.
ರಥಯಾತ್ರೆಯ ಮಾರ್ಗದರ್ಶಿ ಅಧಿಕಾರಿ ಕೆ.ಐ. ಶಾಗನೂರ ಈ ಸಂದರ್ಭ ಮಾಹಿತಿ ನೀಡಿ, ವೀರ ರಾಣಿ ಚನ್ನಮ್ಮನ ಆದರ್ಶ ಮತ್ತು ಶೌರ್ಯಗುಣಗಳು, ದೇಶಪ್ರೇಮ, ಆದರ್ಶ ಎಲ್ಲರಲ್ಲೂ ಮೈಗೂಡಲಿ ಎಂದು ಆಶಿಸಿದರು. ರಥಯಾತ್ರೆ ಜಿಲ್ಲೆಗೆ ಪ್ರವೇಶ ಮಾಡಿದ ಸಂದರ್ಭ ದಿವ್ಯಕ್ಷೇತ್ರ ಮೇಲುಕೋಟೆಯಲ್ಲಿ ಕಲ್ಯಾಣನಾಯಕಿ ಅಮ್ಮನವರ ಬಂಗಾರದ ಶೇಷವಾಹನ ಎದುರಾಗಿ ದರ್ಶನ ನೀಡಿದೆ. ಇದು ಮಹಾ ಯೋಗ ಎಂದರು.
ಯಗ್ಗಡಹಳ್ಳಿ ಕೃಷ್ಣೇಗೌಡರ ತಂಡದ ಗಾರುಡಿಗೊಂಬೆ, ಕೊಂಬುಕಹಳೆ ಮುಂತಾದ ಜಾನಪದ ಕಲಾತಂಡಗಳ ಮೂಲಕ ರಥವನ್ನು ದೇವಾಲಯಕ್ಕೆ ಕರೆತರಲಾಯಿತು. ಪಾರುಪತ್ತೇಗಾರ ಎಂ.ಎನ್ ಪಾರ್ಥಸಾರಥಿ, ಮೇಲುಕೋಟೆ ಉಪ ತಹಸೀಲ್ದಾರ್ ರಾಜೇಶ್, ಗ್ರಾಮ ಆಡಳಿತಾಧಿಕಾರಿ ರಮೇಶ್ ಮತ್ತಿತರರು ಹಾಜರಿದ್ದರು. ರಥ ಮೇಲುಕೋಟೆಯ ಪ್ರಮುಖ ಬೀದಿಯಲ್ಲಿ ಸಂಚರಿಸಿದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣಕ್ಕೆ ಸಾಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net