

ಮೇಲುಕೋಟೆ: ಮಂಡ್ಯ ಜಿಲ್ಲೆಯ ಪ್ರಮುಖ ಪ್ರವಾಸಿತಾಣ ಮೇಲುಕೋಟೆಯಲ್ಲಿ ಪ್ಲಾಸ್ಟಿಕ್ ಕವರ್‌ಗಳನ್ನು ಬಳಕೆ ಮಾಡಿದರೆ ದಂಡ ವಿಧಿಸಲಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ತಿರುಮಲೈ ಎಚ್ಚರಿಕೆ ನೀಡಿದರು.
ಗಾಂಧಿ ಜಯಂತಿ ಪ್ರಯುಕ್ತ ಭಾನುವಾರ ವಿಶೇಷ ಗ್ರಾಮ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ಲಾಸ್ಟಿಕ್ ಬಳಸದಂತೆ ಹಲವು ಸಲ ವ್ಯಾಪಾರಸ್ಥರಿಗೆ ಮತ್ತು ಭಕ್ತರಿಗೆ ಅರಿವು ಮೂಡಿಸಲಾಗಿದೆ. ಆದಾಗ್ಯೂ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿಲ್ಲ. ಇದರಿಂದ ಸರ್ಕಾರದ ಆಶಯಕ್ಕೆ ಧಕ್ಕೆ ಬರುವ ಜತೆಗೆ ಮೇಲುಕೋಟೆಯ ಪರಿಸರ ಕಲುಷಿತವಾಗುತ್ತಿದೆ. ಈ ಕಾರಣದಿಂದ ಗ್ರಾಮ ಪಂಚಾಯಿತಿ ಕಾರ್ಯಪಡೆಯನ್ನು ಬಲವರ್ದನೆ ಮಾಡಿ ಪೊಲೀಸ್ ಸಹಕಾರದೊಂದಿಗೆ ಸ್ವಯಂ ಸೇವಕರನ್ನು ಬಳಸಿಕೊಂಡು ಪ್ಲಾಸ್ಟಿಕ್ ಬಳಕೆ ಮಾಡುವವರಿಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು.
ಮೇಲುಕೋಟೆಯನ್ನು ತಂಬಾಕು ಮುಕ್ತ ಗ್ರಾಮವೆಂದು ಘೋಷಿಸಲೂ ಕ್ರಮವಹಿಸಲಾಗುತ್ತಿದೆ. ಈಗಾಗಲೇ ಕರಪತ್ರ ವಿತರಿಸಿ ಜಾಗೃತಿ ಮೂಡಿಸಲಾಗಿದ್ದು ಮನೆ ಮನೆಗೆ ತೆರಳಿ ತಂಬಾಕು ಬಳಸದಂತೆ ಎಚ್ಚರಿಸಲಾಗಿದೆ. ಅಂತಿಮವಾಗಿ ತಂಬಾಕುಮುಕ್ತ ಪ್ರವಾಸಿ ತಾಣ ಎಂದು ಘೋಷಿಸಲಾಗುತ್ತದೆ ಎಂದರು.
ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಂಡ ಸ್ವಚ್ಛತಾ ಸೇವಾ ಕಾರ್ಯಕ್ರಮದಡಿ ಗ್ರಾಮದ ಸ್ಮಾರಕಗಳ ಬಳಿ ಶುಚಿತ್ವ ಮಾಡಿ ನಾಗರಿಕರಿಗೆ ಸ್ವಚ್ಛತೆ ಜಾಗೃತಿ ಮೂಡಿಸಲಾಯಿತು.