‘ವೈರಮುಡಿ’ ಮಹೋತ್ಸವಕ್ಕೆ ಮೇಲುಕೋಟೆ ಸಜ್ಜು

5mlk3
Published on

ಮೇಲುಕೋಟೆ: ಮೇಲುಕೋಟೆಯಲ್ಲಿ ಏ.7 ರಂದು ರಾತ್ರಿ ನಡೆಯಲಿರುವ ಚೆಲುವನಾರಾಯಣಸ್ವಾಮಿಯ ವಿಶ್ವವಿಖ್ಯಾತ ವೈರಮುಡಿ ಉತ್ಸವಕ್ಕೆ ಮೇಲುಕೋಟೆ ಸಜ್ಜುಗೊಂಡಿದೆ.

ಬ್ರಹ್ಮೋತ್ಸವದ 4ನೇ ತಿರುನಾಳ್ ಅಂಗವಾಗಿ ಏ.7ರಂದು ಸೋಮವಾರ ರಾತ್ರಿ 8ಕ್ಕೆ ಶ್ರೀದೇವಿ-ಭೂದೇವಿ ಸಮೇತ ಗರುಡಾರೂಢನಾದ ಚೆಲುವನಾರಾಯಣನಿಗೆ ವೈರಮುಡಿ ಕಿರೀಟಧಾರಣೆ ಮಾಡಲಾಗುತ್ತದೆ. ಮಹಾಮಂಗಳಾರತಿ ನೆರವೇರಿಸಿ ದೇವಾಲಯದಿಂದ ರಾತ್ರಿ 8.30ಕ್ಕೆ ಆರಂಭವಾಗುವ ವೈರಮುಡಿ ಉತ್ಸವ ಬೆಳಗಿನ 4ರವರೆಗೆ ನಡೆದು ವಾಹನೋತ್ಸವ ಮಂಟಪದಲ್ಲಿ ಮಕ್ತಾಯವಾಗಲಿದೆ. ನಂತರ ವಜ್ರಖಚಿತ ರಾಜಮುಡಿ ಧರಿಸಲಾಗುತ್ತದೆ.

ರಾಜ್ಯ ಹಾಗೂ ಹೊರರಾಜ್ಯಗಳಿದ ತಂಡೋಪತಂಡವಾಗಿ ಮೇಲುಕೋಟೆಗೆ ಭಕ್ತರು ಆಗಮಿಸುತ್ತಿದ್ದು, ಎಲ್ಲ ಛತ್ರಗಳು, ರಾಮಾನುಜಕೂಟಂಗಳು, ವಸತಿಗೃಹಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ವೈವಿಧ್ಯಮಯ ದೀಪಾಲಂಕಾರದಿಂದ ರಾಜಬೀದಿ, ಉತ್ಸವಬೀದಿಗಳು ನಯನಮನೋಹರವಾಗಿ ಕಂಗೊಳಿಸುತ್ತಿದ್ದು, ಯೋಗನರಸಿಂಹಸ್ವಾಮಿ ಬೆಟ್ಟ, ಕಲ್ಯಾಣಿ, ಅಕ್ಕತಂಗಿಕೊಳ ಹಾಗೂ ಉತ್ಸವ ಬೀದಿಗೆ ಹೆಚ್ಚಿನ ದೀಪಾಲಂಕಾರ ಮಾಡುವ ಕಾರ್ಯ ಭರದಿಂದ ಸಾಗಿದೆ.

ಜಕ್ಕನಹಳ್ಳಿ ಬಳಿ ವೈರಮುಡಿಗೆ ಸ್ವಾಗತಕೋರುವ ದೀಪಾಲಂಕಾರ ಫಲಕ ಅಳವಡಿಸಲಾಗಿದ್ದು, ಅಲ್ಲಿಂದಲೇ 7ಕಿಮೀ ಉದ್ದಕ್ಕೂ 75 ಅಡಿ ಅಂತರದಲ್ಲಿ ದೀಪದ ತೋರಣಗಳನ್ನು ಅಳವಡಿಸಲಾಗಿದೆ. ವೈರಮುಡಿ ಉತ್ಸವವನ್ನು ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿರುವ ಎಲ್.ಇ.ಡಿ. ಪರದೆಗಳು ಹಾಗೂ ಜಕ್ಕನಹಳ್ಳಿ, ಬೆಳ್ಳಾಳೆ, ತೊಣ್ಣುರು, ಕೆನ್ನಾಳು ಗ್ರಾಮಗಳಲ್ಲಿ ಎಲ್.ಇ.ಡಿ. ಪರದೆಗಳ ಮೂಲಕ ಪ್ರಥಮ ಭಾರಿಗೆ ನೇರಪ್ರಸಾರ ಮಾಡಲಾಗುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಮಾರ್ಗದರ್ಶನದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಉತ್ಸವದ ಯಶಸ್ಸಿಗಾಗಿ ವಿಶೇಷ ಕಾಳಜಿ ವಹಿಸಿದ್ದಾರೆ. ಜಿಲ್ಲಾಧಿಕಾರಿ ಡಾ.ಕುಮಾರ್, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಾಲದಂಡಿ ನೇತೃತ್ವದಲ್ಲಿ ಅಧಿಕಾರಿಗಳು ವೈರಮುಡಿ ಬ್ರಹ್ಮೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.ಎರಡನೇ ತಿರುನಾಳ್ ಅಂಗವಾಗಿ ಶನಿವಾರ ಚೆಲುವನಾರಾಯಣನಿಗೆ ಮುತ್ತುಮುಡಿ ಕಿರೀಟದ ಅಲಂಕಾರದಲ್ಲಿ ರಾತ್ರಿ ದೊಡ್ಡ ಶೇಷವಾಹನೋತ್ಸವ ಅದ್ದೂರಿಯಾಗಿ ನೆರವೇರಿತು.

ಏ.6 ರಂದು ನಾಗವಲ್ಲಿ ಮಹೋತ್ಸವ

ವೈರಮುಡಿ ಜಾತ್ರಾ ಮಹೋತ್ಸವದ 3ನೇ ತಿರುನಾಳ್ ಅಂಗವಾಗಿ ಏ.6 ರಂದು ಮಧ್ಯಾಹ್ನ 2 ಗಂಟೆಯಿಂದ ವಿಶೇಷ ಪುಷ್ಪಾಲಂಕೃತ ಚಿನ್ನದಪಲ್ಲಕ್ಕಿ ಉತ್ಸವ ಆರಂಭವಾಗಲಿದೆ. ಕಲ್ಯಾಣಿಯಲ್ಲಿ ನಾಗವಲ್ಲಿ ಮಹೋತ್ಸವ ನಡೆದ ನಂತರ ರಾತ್ರಿ ಚಿನ್ನದಪಲ್ಲಕ್ಕಿಯಲ್ಲಿ ಕಲ್ಯಾಣ ನಾಯಕಿಯೊಂದಿಗೆ ಚೆಲುವನಾರಾಯಣಸ್ವಾಮಿಯ ಉತ್ಸವದ ಭವ್ಯಮೆರವಣಿಗೆ ತಿರುವೀದಿಗಳಲ್ಲಿ ನಡೆಯಲಿದೆ. ನಂತರ ಚಂದ್ರಮಂಡಲವಾಹನೋತ್ಸವ ಇದೆ.

ಇದಕ್ಕೂ ಮುನ್ನ ಮಂಡ್ಯಜಿಲ್ಲಾ ಖಜಾನೆಯಲ್ಲಿರುವ ವೈರಮುಡಿ, ರಾಜಮುಡಿ ತಿರುವಾಭರಣ ಪೆಟ್ಟಿಗೆಗಳನ್ನು ಮೇಲುಕೋಟೆಗೆ ತಂದು ಇಲ್ಲಿನ ವೀರಾಂಜನೇಯಸ್ವಾಮಿ ಸನ್ನಿಧಿಯಲ್ಲಿ ಪೂಜೆಮಾಡಿ ಚಿನ್ನದಪಲ್ಲಕ್ಕಿಯಲ್ಲಿ ಮೆರವಣಿಗೆಯ ಮೂಲಕ ದೇಗುಲಕ್ಕೆ ತರಲಾಗುತ್ತದೆ. ವೈರಮುಡಿ ಪೆಟ್ಟಿಗೆಗೆ ಮಂಡ್ಯದ ಲಕ್ಷ್ಮೀಜನಾದರ್ನಸ್ವಾಮಿ ಸನ್ನಿಧಿಯಲ್ಲಿ ಪ್ರಥಮಪೂಜೆ ನಡೆದರೆ ದೇವಾಲಯದ ಮುಂಭಾಗ ಯತಿರಾಜದಾಸರ್ ಗುರುಪೀಠದಿಂದ ಕೊನೆಯಪೂಜೆ ನಡೆಯಲಿದೆ. ನಂತರ ಸ್ಥಾನಿಕರು,ಅರ್ಚಕ, ಪರಿಚಾರಕರಿಗೆ ಪಾರ್ಕಾವಣೆ ಮಾಡಲಾಗುತ್ತದೆ

ಏ.7ರಂದು ಬೆಳಗ್ಗೆ ಜಿಲ್ಲಾ ಖಜಾನೆಯಿಂದ ವಜ್ರಖಚಿತ ಆಭರಣವನ್ನು ಲಕ್ಷ್ಮೀ ಜನಾರ್ದನಸ್ವಾಮಿ ದೇವಾಲಯ, ಇಂಡುವಾಳು, ಕೆ. ಶೆಟ್ಟಹಳ್ಳಿ, ಬಾಬುರಾಯನಕೊಪ್ಪಲು, ಶ್ರೀರಂಗಪಟ್ಟಣ, ಬನ್ನಿಮಂಟಪ, ಕಿರಂಗೂರು, ದರಸಗುಪ್ಪೆ, ಪಾಂಡವಪುರ, ಹರಳಹಳ್ಳಿ, ಬನಘಟ್ಟ, ಕೆ.ಹೊಸೂರು ಗೇಟ್, ಟಿ.ಎಸ್. ಛತ್ರ, ಬೆಳ್ಳಾಳೆ, ಅಮೃತಿ, ಜಕ್ಕನಹಳ್ಳಿ ಮಾರ್ಗವಾಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಮೇಲುಕೋಟೆಗೆ ತೆಗೆದುಕೊಂಡು ಹೋಗಲಾಗುವುದು.

ವಿಶೇಷ ವ್ಯವಸ್ಥೆಗಳು

ವೈರಮುಡಿ ಉತ್ಸವದಂದು ಅನ್ನದಾನ ಭವನದಲ್ಲಿ 24 ಗಂಟೆ ಪ್ರಸಾದ ವಿತರಣೆ

ವೈರಮುಡಿ ಉತ್ಸವದ ವಿಧಿವಿಧಾನಗಳು 9 ಬೃಹತ್ ಪರದೆಗಳಲ್ಲಿ ಉತ್ಸವ ಬೀದಿಯಲ್ಲಿ ಪ್ರಸಾರ

ಭಕ್ತರ ಸುರಕ್ಷತೆಗಾಗಿ 1000 ಮಂದಿ ಪೊಲೀಸರಿಂದ ಭದ್ರತೆ

64 ಸಿಸಿ ಟಿವಿ ಕಣ್ಗಾವಲು, 8 ಆಂಬುಲೆನ್ಸ್‌ನೊಂದಿಗೆ ಸುಸಜ್ಜಿತ ವೈದ್ಯಕೀಯ ತಂಡ ನಿಯೋಜನೆ

ಶುಧ್ದ ಕುಡಿಯುವ ನೀರು, ನಿರಂತರ ಸ್ವಚ್ಛತೆ, ಬ್ಯಾರಿಕೇಡ್ ಅಳವಡಿಕೆ

ಬೆಂಗಳೂರು, ಮಂಡ್ಯ, ನಾಗಮಂಗಲ, ಕೆ.ಆರ್.ಪೇಟೆ, ಮೈಸೂರು, ಹಾಸನದಿಂದ 150ವಿಶೇಷ ಬಸ್ ಸೌಕರ್ಯ

ಭಕ್ತರ ವಾಹನಗಳಿಗೆ 14 ಕಡೆ ವ್ಯವಸ್ಥಿತ ಪಾರ್ಕಿಂಗ್

ದೇವಾಲಯಕ್ಕೆ ಆಕರ್ಷಕ ಪುಷ್ಪಾಲಂಕಾರ

ವೈರಮುಡಿಯನ್ನು ಮಹಾರಾಜರು ವೀಕ್ಷಿಸುತ್ತಿದ್ದ ಸ್ಥಳದಲ್ಲಿ ಪ್ರಥಮ ಬಾರಿಗೆ ಪುಷ್ಪಮಂಟಪ ನಿರ್ಮಾಣ

ಚೆಲುವನಾರಾಯಣನ ಉತ್ಸವಗಳಿಗೆ ವಿಶೇಷ ತೋಮಾಲೆ ಸೇವೆ. ವಿಶೇಷ ಮಂಗಳವಾದ್ಯ ತಂಡ ನಿಯೋಜನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net