

ವಿಜಯವಾಣಿ ಸುದ್ದಿಜಾಲ ಕೋಟ
ಕೋಟ ಹೋಬಳಿ ವ್ಯಾಪ್ತಿಯಲ್ಲಿ ಕಲ್ಲಂಗಡಿ ಬೆಳೆಗಾರರ ಪರಿಸ್ಥಿತಿ ಶೋಚನೀಯವಾಗಿದೆ. ಭಾರಿ ಲಾಭದಾಯಕ ಬೆಳೆಯಾಗಿ ನಿರೀಕ್ಷಿಸಿದ್ದ ಕಲ್ಲಂಗಡಿ ಅಕಾಲಿಕ ಮಳೆಗೆ ಸಂಪೂರ್ಣ ಕೊಳೆತು ನಾಶವಾಗಿದೆ.
ಇಲ್ಲಿನ ಕೋಟದ ಹರ್ತಟ್ಟು ಸಿದ್ದ್ಧ ದೇವಾಡಿಗ, ಮಣೂರು ಭಾಗದ ಜಯರಾಮ ಶೆಟ್ಟಿ, ರತ್ನಾಕರ ಹೊಳ್ಳ, ಅಜಿತ್ ದೇವಾಡಿಗ ಸೇರಿದಂತೆ ಕಲ್ಲಂಗಡಿ ಬೆಳೆದ ಹಲವಾರು ಬೆಳೆಗಾರರ ಸ್ಥಿತಿ ಅಯೋಮಯವಾಗಿದೆ.
ಕೋಟದ ಹರ್ತಟ್ಟು ಪರಿಸರದ ಸಿದ್ದ ದೇವಾಡಿಗ(ಶ್ರೀಧರ) ಮೂರು ಎಕರೆಗೂ ಅಧಿಕ ಭೂಮಿಯಲ್ಲಿ ಕಲ್ಲಂಗಡಿ ಹಣ್ಣು ಬೆಳೆದಿದ್ದು ಫಸಲು ಕೈಗೆ ಬರುತ್ತಿದ್ದಂತೆ ಬೇಸಿಗೆಯಲ್ಲಿ ಅಕಾಲಿಕವಾಗಿ ಸುರಿದ ಮಳೆಗೆ ಕೊಳೆತು ಹೋಗಿವೆ. ಇನ್ನೊಂದೆಡೆ ಅಲ್ಲಿ ಇಲ್ಲಿ ಉಳಿದ ಕಲ್ಲಂಗಡಿ ಬೆಳೆ ದರವಿಲ್ಲದೆ ಕಣ್ಣೀರಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೇಸಿಗೆಯ ಬೇಗೆಯನ್ನು ನೀಗಿಸುವ ಕಲ್ಲಂಗಡಿ ಪ್ರತಿವರ್ಷ ಮಾರ್ಚ್, ಏಪ್ರಿಲ್, ಮೇ ತಿಂಗಳಿನಲ್ಲಿ ಭಾರಿ ಬೇಡಿಕೆ ಇರುತ್ತದೆ. ಆದರೆ ಈ ಬಾರಿ ಅದೇ ಪ್ರಮಾಣದಲ್ಲಿ ನಿರೀಕ್ಷೆ ಮಾತ್ರ ಹುಸಿಯಾಗಿದ್ದು ರೈತ ಸಮುದಾಯದಲ್ಲಿ ಖರೀದಿ ದರದಲ್ಲಿ ದಯನೀಯ ಸ್ಥಿತಿ ತಲುಪಿದೆ. ಪ್ರತಿಷರ್ಷ ಕೆ.ಜಿಗೆ 10 ರೂ. ಮೇಲ್ಪಟ್ಟು ಸಿಗುತ್ತಿದ್ದು ಈ ವರ್ಷ 6ರಿಂದ 7ರೂ.ಗಳಿಗೆ ಖರೀದಿ ನಡೆಯುತ್ತಿದೆ. ಒಂದೆಡೆ ಹಾನಿ ಇನ್ನೊಂದೆಡೆ ದರವಿಲ್ಲದೆ ಕಲ್ಲಂಗಡಿ ಬೆಳೆಗಾರರು ಕಂಗೆಟ್ಟಿದ್ದಾರೆ.
ಪ್ರತಿವರ್ಷ ಕೋಟ, ಕೋಟತಟ್ಟು, ಸಾಲಿಗ್ರಾಮ ಪ.ಪಂ, ಪಾಂಡೇಶ್ವರ, ಐರೋಡಿ, ಕೋಡಿ ಹೀಗೆ ಇನ್ನಿತರ ವ್ಯಾಪ್ತಿಯಲ್ಲಿ ಕಲ್ಲಂಗಡಿ ಹಣ್ಣು ಬೆಳೆಯುತ್ತಿದ್ದು ಪ್ರತಿವರ್ಷ ವಾತಾವರಣದಲ್ಲಾಗುವ ವೈಪರಿತ್ಯದಿಂದ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಹೀಗಾದರೆ ಮುಂದಿನ ದಿನಗಳಲ್ಲಿ ಈ ಭಾಗಗಳಲ್ಲಿ ಕಲ್ಲಂಗಡಿ ಬೆಳೆಯನ್ನೇ ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು.
ಕೋಟ ಹೋಬಳಿ ಭಾಗದದಲ್ಲಿ ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಪದ್ಧತಿಯಲ್ಲಿ ಕಲ್ಲಂಗಡಿ ಬೆಳೆಯುತ್ತಾರೆ. ಅದಕ್ಕಾಗಿ ಇಲ್ಲಿನ ಕಲ್ಲಂಗಡಿಗೆ ಭಾರಿ ಬೇಡಿಕೆ ಇರುತ್ತದೆ. ಆದರೆ ಅಕಾಲಿಕ ಮಳೆಯಿಂದ ಕಲ್ಲಂಗಡಿ ಬೇಡಿಕೆ ಕುಸಿದಿದ್ದು ರೈತ ಸಮುದಾಯ ತಲೆಮೇಲೆ ಕೈ ಇಟ್ಟು ಕೂರುವಂತಾಗಿದೆ.
ಕರಾವಳಿಯ ಮರಳು ಮಿಶ್ರಿತ ಮಣ್ಣಿನಲ್ಲಿ ಶೇಂಗಾ(ನೆಲಗಡಲೆ) ಬೆಳೆ ಬೆಳೆಯುತ್ತಾರೆ. ಶೇಂಗಾ ಬೆಳೆಗೂ ವಾತಾವರಣ ವ್ಯತ್ಯಾಸ ಕಾರ್ಮೋಡ ಕವಿದಿದೆ. ಬೆಳೆ ಕೈ ಸೇರುವ ಹೊತ್ತಲ್ಲಿ ಮಳೆಯಿಂದ ಶೇಂಗಾ ಬೆಳೆ ಹಾನಿಗೊಂಡಿದ್ದು ಬೇಡಿಕೆಯೂ ಕುಸಿದಿದೆ.
ಪ್ರತಿವರ್ಷ ಒಂದಲ್ಲ ಒಂದು ರೀತಿಯಲ್ಲಿ ಬೆಳೆ ಕೈಕೊಡುತ್ತಿದೆ. ಕರಾವಳಿಭಾಗದ ರೈತ ಸಮುದಾಯದ ಕೈ ಹಿಡಿದ ಕಲ್ಲಂಗಡಿ ಕಳೆದ ಮೂರು ನಾಲ್ಕು ವರ್ಷಗಳಿಂದ ವಾತಾವರಣ ವ್ಯತ್ಯಾಸಗಳಿಂದ ಭಾರಿ ನಷ್ಟ ಅನುಭವಿಸುತ್ತಿದ್ದೇವೆ. ಆದರೆ ಈ ಬಾರಿ ಒಳ್ಳೆಯ ಇಳುವರಿ ಬಂದಿದ್ದು ಅಕಾಲಿಕ ಮಳೆಯಿಂದ ಕೈ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಹೀಗಾದರೆ ಮುಂದಿನ ದಿನಗಳಲ್ಲಿ ಕೃಷಿ ಕಾಯಕ ಕಷ್ಟಕರ -ಸಿದ್ದ ದೇವಾಡಿಗ ಕಲ್ಲಂಗಡಿ ಬೆಳೆಗಾರರು https://www.vijayavani.net/kudrubeedu-sri-umamaheshwara-temple-vardhanti-sampanna https://www.vijayavani.net/embrace-ambedkars-ideals