ಶರಣನ ಗುಡಿಗೆ ಮೇಳಕುಂದಾದಿಂದ ಸದ್ಭಾವನಾ ಪಾದಯಾತ್ರೆ

padayatre
Published on

ಕಲಬುರಗಿ: ಶ್ರಾವಣ ಮಾಸದ ನಿಮಿತ್ತ ಭಕ್ತರಲ್ಲಿ ಸದ್ಭಾವನೆ ಮೂಡಿಸಿ, ಧರ್ಮ, ಭಕ್ತಿ, ಸಂಸ್ಕೃತಿ, ಕಾಯಕ, ದಾಸೋಹದ ಮಹತ್ವವನ್ನು ಸಾರುವ ಸದ್ಭಾವನೆಗಳನ್ನು ಮೂಡಿಸುವ ಶ್ರೇಷ್ಠ  ಧ್ಯೇಯದೊಂದಿಗೆ ಮೇಳಕುಂದಾ (ಬಿ) ಗ್ರಾಮದ ಶ್ರೀ ಬೋಗೇಶ್ವರ ಪುಣ್ಯಧಾಮದ ಶ್ರೀ ಶಶಿಕುಮಾರ ದೇವರು ನೇತೃತ್ವದಲ್ಲಿ ನೂರಾರು ಭಕ್ತರು ಗುರುವಾರ ಸದ್ಭಾವನ ಯಾತ್ರೆ ನಡೆಸಲಾಯಿತು.

ಮೇಳಕುಂದಾ ಬಿ ಗ್ರಾಮದಿಂದ ಕಲಬುರಗಿಯ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ದೇವಸ್ಥಾನದವರೆಗೆ ಪಾದಯಾತ್ರೆ ನಡೆಯಿತು. ಬೆಳಗ್ಗೆ ಆರಂಭವಾದ ಯಾತ್ರೆಯೂ ಮೇಳಕುಂದಾ ಕೆ, ಹಡಗಿಲ ಹಾರುತಿ, ಶರಣ ಸಿರಸಗಿ ಮಾರ್ಗವಾಗಿ ದೇವಸ್ಥಾನ ತಲುಪಿತು. ಮಾರ್ಗ ಮಧ್ಯೆ ಭಕ್ತರಿಗೆ ವಿವಿಧ ಭಕ್ತರು ಪ್ರಸಾದ ವ್ಯವಸ್ಥೆ ಕಲ್ಪಿಸಿದರು.

ಮಹಿಳೆಯರು, ಪುರುಷರು, ಮಕ್ಕಳು ಸೇರಿ ನೂರಾರು ಜನರು ಡೋಲು, ಚಳ್ಳಮ ವಾದ್ಯಗಳೊಂದಿಗೆ ಭಜನೆ ಮಾಡಿ, ಶರಣಬಸವೇಶ್ವರ, ಭೋಗೇಶ್ವರರು, ಶಿವಕುಮಾರ ದೇವರು ಶ್ರೀಗಳಿಗೆ ಜೈಕಾರ ಹಾಕುತ್ತ ಕೇಸರಿ ಧ್ವಜಗಳೊಂದಿಗೆ ಪಾದಯಾತ್ರೆಯಲ್ಲಿ ಭಕ್ತಿ ಭಾವದಿಂದ ಭಾಗವಹಿಸಿ, ಶರಣರ ದರ್ಶನ ಪಡೆದರು.

ಪಾದಯಾತ್ರೆಯಲ್ಲಿ ಬಂದ ಶ್ರೀ ಭೋಗೇಶ್ವರ ಭಜನಾ ಮಂಡಳಿ, ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿ, ಶ್ರೀ ಸಿದ್ದೇಶ್ವರ ಭಜನಾ ಮಂಡಳಿ ಸೇರಿ ನೂರಾರು ಭಕ್ತರು ಶರಣರ ಸನ್ನಿಧಿಯಲ್ಲಿ ಭಜನೆ ಸೇವೆ ಸಲ್ಲಿಸಿ, ಮಹಾಮಂಗಳಾರತಿ ಅರ್ಪಿಸಲಾಯಿತು. ಯಾತ್ರೆಯ ನೇತೃತ್ವ ವಹಿಸಿದ ಪೂಜ್ಯ ಶಶಿಕುಮಾರ ದೇವರು, ಮಕ್ತಂಪುರ ಗದ್ದುಗೆ ಮಠದ ಶ್ರೀ ಚರಲಿಂಗ ಸ್ವಾಮೀಜಿ ಅವರು ಮಹಾದಾಸೋಹ ಮನೆಯ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಸೇರಿ ದಾಸೋಹ ಮನೆಯವರನ್ನು ಭೇಟಿ ಮಾಡಿ, ಕುಶಲೋಪರಿ ವಿಚಾರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net