ವೈರಮುಡಿ ಉತ್ಸವ ವಿಜೃಂಭಣೆಯಿಂದ ನಡೆಯಲಿ: ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಸೂಚನೆ

Mla Meeting)
Published on

ಮಂಡ್ಯ: ಮೇಲುಕೋಟೆಯ ಚಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವವು ಮಾ.27ರಿಂದ ಏ.8ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡು ಆಚರಣೆಗಳು ವಿಜೃಂಭಣೆಯಿಂದ ನಡೆಯಲಿ ಎಂದು ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅಚ್ಚುಕಟ್ಟಾಗಿ ನಡೆಯಬೇಕು. ಅಧಿಕಾರಿಗಳು ಇದಕ್ಕೆ ಬೇಕಿರುವ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದರು.

ಮೇಲುಕೋಟೆ ಮುಖ್ಯ ರಸ್ತೆಗಳ ದುರಸ್ತಿ ಕಾರ್ಯಗಳನ್ನು ಕೈಗೊಂಡು ಬೇಗನೆ ಪೂರ್ಣಗೊಳಿಸಿ. ಭಕ್ತರ ಅಗತ್ಯತೆಗೆ ತಕ್ಕಂತೆ ಸಾರಿಗೆ, ಶೌಚಗೃಹದ ವ್ಯವಸ್ಥೆ, ಸಿಸಿ ಕ್ಯಾಮೆರಾ, ನಿರಂತರ ವಿದ್ಯುತ್ ಸರಬರಾಜು ಹಾಗೂ ಅಚ್ಚುಕಟ್ಟಾಗಿ ದೀಪಾಲಂಕಾರವನ್ನು ಮಾಡಬೇಕು. ಪ್ರಮುಖವಾಗಿ ಮೇಲುಕೋಟೆ ದಾಸೋಹ ಭವನದಲ್ಲಿ ಎಲ್ಲರಿಗೂ ದಾಸೋಹದ ವ್ಯವಸ್ಥೆ ಮಾಡುವಂತೆ ಸೂಚಿಸಿದ ಅವರು, ವಾಹನದ ಪಾರ್ಕಿಂಗ್ ಸ್ಥಳವು ಸಮತಟ್ಟಾಗಿ ಇರಲಿ. ಜತೆಗೆ ಸ್ಥಳದಲ್ಲಿ ವಿದ್ಯುತ್ ದೀಪ ವ್ಯವಸ್ಥೆ ಮಾಡಿ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಆದ್ದರಿಂದ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ಹೆಚ್ಚು ಜನ ಸೇರುವ ವಾಹನ ಪಾರ್ಕಿಂಗ್ ಸ್ಥಳ, ದೇವಸ್ಥಾನದ ಹತ್ತಿರ ಕುಡಿಯುವ ನೀರಿನ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಿ ಎಂದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಂ ರಾಯಪುರ ಮಾತನಾಡಿ, ಬ್ರಹ್ಮೋತ್ಸವಕ್ಕೆ ಸಂಬಂಧಿಸಿದಂತೆ ಎಲ್ಲ ಅಗತ್ಯತೆಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಿ. ತಮಗೆ ವಹಿಸಿರುವ ಕೆಲಸಗಳಿಗೆ ಸಂಬಂಧಪಟ್ಟಂತೆ ಉಪಸಮಿತಿ ರಚಿಸಿಕೊಂಡು ಕೆಲಸ ನಿರ್ವಹಿಸಿ. ಕೆರೆ ತೊಣ್ಣೂರಿನಲ್ಲೂ ಕೂಡ ಉತ್ಸವ ಆಗಬೇಕು. ಏ.1ರಂದು ನಡೆಯುವ ವೈರಮುಡಿ ಉತ್ಸವಕ್ಕೂ ಮುಂಚಿತವಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಉತ್ಸವ ನಡೆಯಬೇಕು. ಜಲಕ್ರೀಡೆ ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net