

ಮೇಲುಕೋಟೆ: ಮೇಲುಕೋಟೆಯ ಚಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವವು ಮಾ.27 ರಿಂದ ಏ.8ರವರೆಗೆ ನಡೆಯಲಿದೆ. ಇದಕ್ಕಾಗಿ ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ತಿಳಿಸಿದರು.
ಮೇಲುಕೋಟೆಯ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಏ.1ರಂದು ವೈರಮುಡಿ ಕಿರೀಟಧಾರಣೆ ನಡೆಯಲಿದೆ. ಹೆಚ್ಚಿನ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಭಕ್ತರಿಗೆ ಅಗತ್ಯ ಮೂಲ ಸೌಕರ್ಯ ವ್ಯವಸ್ಥಿತವಾಗಿ ನಡೆಯಬೇಕು ಎಂದರು.
ಕುಡಿಯುವ ನೀರಿನ ಟ್ಯಾಂಕರ್‌ಗಳು ಅಗತ್ಯತೆಗೆ ತಕ್ಕಂತೆ ವ್ಯವಸ್ಥೆಯಾಗಬೇಕು. ಬಿಸಿಲು ಹೆಚ್ಚಿರುವುದರಿಂದ ಟ್ಯಾಂಕರ್ ನೀರು ಖಾಲಿಯಾದಂತೆ ಮರುಪೂರಣವಾಗಬೇಕು. ಶೌಚಗೃಹ, ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು. ವಯಸ್ಸಾದವರು ಹಾಗೂ ಅಂಗವಿಕಲರಿಗೆ ಬ್ಯಾಟರಿ ಚಾಲಿತ ವಾಹನದ ವ್ಯವಸ್ಥೆಯಾಗಬೇಕು ಎಂದು ಸೂಚಿಸಿದರು.
ಏ.1ರಂದು ವೈರಮುಡಿ ಕಿರೀಟ ಧಾರಣೆ ಮಹೋತ್ಸವ ನಡೆಯಲಿದೆ. ರಾಜಮುಡಿ ಹಾಗೂ ವೈರಮುಡಿಯನ್ನು ಜಿಲ್ಲಾ ಖಜಾನೆಯಿಂದ ಮೇಲುಕೋಟೆಗೆ ತೆಗೆದುಕೊಂಡು ಹೋಗುವಾಗ ಮಾರ್ಗದಲ್ಲಿ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾರೆ. ಇದಕ್ಕೆ ಭದ್ರತಾ ವ್ಯವಸ್ಥೆಯಾಗಬೇಕು. ಜಿಲ್ಲಾ ಖಜಾನೆಯಿಂದ ಲಕ್ಷ್ಮೀಜನಾರ್ದನಸ್ವಾಮಿ ದೇವಸ್ಥಾನ, ಇಂಡುವಾಳು, ತೂಬಿನಕೆರೆ, ಗಣಂಗೂರು, ಶೆಟ್ಟಿಹಳ್ಳಿ, ಕಿರಂಗೂರು, ಬನ್ನಿಮಂಟಪ, ಕೂಡಲಕುಪ್ಪೆ ಗೇಟ್, ದರಸಗುಪ್ಪೆ, ಪಾಂಡವಪುರ ರೈಲ್ವೆ ನಿಲ್ದಾಣ, ಕೆನ್ನಾಳು, ಪಾಂಡವಪುರ, ಹಿರೇಮರಳಿ ಗೇಟ್, ಬಳಘಟ್ಟ, ಟಿ.ಎಸ್.ಛತ್ರ, ಮಹದೇಶ್ವರಪುರ, ಬೆಳ್ಳಾಳೆ, ಜಕ್ಕನಹಳ್ಳಿ ಹಾಗೂ ಮೇಲುಕೋಟೆ ತಲುಪಲಿದೆ. ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ರಾಜಮುಡಿ ಹಾಗೂ ವೈರಮುಡಿ ಸಾಗುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಯಾವುದಾದರೂ ಸ್ಥಳ ಬಿಟ್ಟು ಹೋಗಿದ್ದಲ್ಲಿ ಸೇರಿಸಿ. ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಆಂಬ್ಯುಲೆನ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿ ನೇಮಕ, ಕೊಳದ ಹತ್ತಿರ ನುರಿತ ಈಜುಗಾರರನ್ನು ನಿಯೋಜನೆ, ಸಿ.ಸಿ ಕ್ಯಾಮೆರಾ ಅಳವಡಿಕೆ, ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಗಮನಹರಿಸಿ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ವೈರಮುಡಿ ಬ್ರಹ್ಮೋತ್ಸವಕ್ಕೆ ಬೇರೆ ಜಿಲ್ಲೆ, ರಾಜ್ಯದಿಂದ ಭಕ್ತರು ಆಗಮಿಸಲಿದ್ದಾರೆ. ಅವರಿಗೆ ಯಾವುದೇ ಕೊರತೆಯಾಗದಂತೆ ವ್ಯವಸ್ಥೆಯಾಗಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ಥಳೀಯ ಹಾಗೂ ಜಿಲ್ಲೆಯ ನುರಿತ ಕಲಾವಿದರಿಗೆ ಅವಕಾಶ ನೀಡಿ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ, ಎಎಸ್‌ಪಿ ತಿಮ್ಮಯ್ಯ, ಉಪವಿಭಾಗಾಧಿಕಾರಿ ನಂದೀಶ್ ಇತರರಿದ್ದರು.
ಸಭೆ ಬಳಿಕ ಪಾರ್ಕಿಂಗ್ ವ್ಯವಸ್ಥೆ, ವಾಹನ ಸಂಚಾರ, ರಸ್ತೆ, ದಾಸೋಹ ಇನ್ನಿತರೆ ವ್ಯವಸ್ಥೆಗಳ ಬಗ್ಗೆ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.