

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ತೂಬಗೆರೆ
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ಮೇಳೆಕೋಟೆಯಲ್ಲಿ ಅಂಗನವಾಡಿ ಕೇಂದ್ರಕ್ಕೆ ವರ್ಗವಾದ ಶಿಕ್ಷಕಿಯ ಕರ್ತವ್ಯಕ್ಕೆ ಗ್ರಾಮಸ್ಥರೇ ಅಡ್ಡಿಪಡಿಸಿದ ಪ್ರಕರಣ ಸದ್ದು ಮಾಡಿದೆ. ಪ್ರಕರಣಕ್ಕೆ ಜಾತಿ ಬಣ್ಣ ಬಳಿದುಕೊಂಡಿದ್ದು, ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ.
ವಿಷಯ ತಿಳಿದ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ. ಶಿಕ್ಷಕಿಯ ನಿಯೋಜನೆ ನಿಯಮಬಾಹಿರ ಎಂಬುದು ಗ್ರಾಮಸ್ಥರ ಆರೋಪವಾದರೆ, ಶಿಕ್ಷಕಿ ಇಲಾಖೆಗೆ ಒದಗಿಸಿರುವ ದಾಖಲೆ ನಿಖರವಾಗಿದ್ದು, ನಿಯಮಾವಳಿಯಂತೆಯೇ ನೇಮಕ ಮಾಡಲಾಗಿದೆ ಎಂಬುದು ಅಧಿಕಾರಿಗಳ ಸ್ಪಷ್ಟನೆ.
ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ತಿಕ್ಕಾಟ ತಾತ್ಕಾಲಿಕವಾಗಿ ಶಮನವಾಗಿದೆ. ಮುಂದಿನ ಸೋಮವಾರ (ಜು.31) ಇದೇ ಗ್ರಾಮದಲ್ಲಿ ಕರೆದಿರುವ ಗ್ರಾಮಸಭೆಯಲ್ಲಿ ಈ ವಿಷಯಕ್ಕೆ ತಾರ್ಕಿಕ ಅಂತ್ಯ ದೊರಕಿಸುವ ಸಂಬಂಧ ಗ್ರಾಮಸ್ಥರು ಹಾಗೂ ಅಧಿಕಾರಿಗಳು ಒಮ್ಮತಕ್ಕೆ ಬಂದಿದ್ದಾರೆ.
ಏನಿದು ಪ್ರಕರಣ? ರಾಜಘಟ್ಟದ ಅಂಗನವಾಡಿಯಲ್ಲಿ ಸಹಾಯಕಿಯಾಗಿದ್ದ ಆನಂದಮ್ಮ ಅವರು ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ನಿಯಮಾವಳಿ ಪ್ರಕಾರ ಅವರಿಗೆ ಬಡ್ತಿ ನೀಡಿ ಮೇಳೆಕೋಟೆಯ 2ನೇ ವಾರ್ಡ್‌ನ ಅಂಗನವಾಡಿಗೆ ಶಿಕ್ಷಕಿಯಾಗಿ ವರ್ಗಾವಣೆ ಮಾಡಲಾಗಿತ್ತು. ಆದರೆ ಗ್ರಾಮಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ನಿಯಮದ ಪ್ರಕಾರ ಸ್ಥಳೀಯರಿಗೆ ಶಿಕ್ಷಕಿ ಹುದ್ದೆ ನೀಡಬೇಕು. ಆನಂದಮ್ಮ ದೊಡ್ಡರಾಯನಪಾಳ್ಯದಲ್ಲಿ ವಾಸಿಸುತ್ತಿರುವ ವಾಸ ದೃಢೀಕರಣ ಪತ್ರ ಸಲ್ಲಿಸಿರುವುದು ಸುಳ್ಳು. ಬೇರೆ ಗ್ರಾಮದವರಿಗೆ ಅವಕಾಶ ಮಾಡಿಕೊಟ್ಟಿರುವುದು ಸರಿಯಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕಿಗೆ ಕರ್ತವ್ಯ ನಿರ್ವಹಿಸಲು ಗ್ರಾಮಸ್ಥರು ಅಡ್ಡಿ ಮಾಡುತ್ತಿದ್ದು ಪ್ರಕರಣಕ್ಕೆ ಬೆಂಕಿಹೊತ್ತಿಕೊಂಡಿದೆ.
ಜಾತಿ ಬಣ್ಣ: ದಲಿತ ಸಮುದಾಯದ ಆನಂದಮ್ಮ ಅವರನ್ನು ನಿಯೋಜಿರುವುದು ಗ್ರಾಮದ ಕೆಲವರಿಗೆ ಅಪಥ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಖುದ್ದು ಶಿಕ್ಷಕಿ ಆನಂದಮ್ಮ ಸಹ ಇದೇ ವಿಷಯ ಪ್ರಸ್ತಾಪಿಸಿದ್ದು, ದಲಿತಳು ಎಂಬ ಕಾರಣಕ್ಕೆ ಇಂಥ ಸನ್ನಿವೇಶ ನಿರ್ಮಾಣ ಮಾಡಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ಆದರೆ ಇದನ್ನು ಅಲ್ಲಗಳೆದಿರುವ ಗ್ರಾಮಸ್ಥರು ದೊಡ್ಡರಾಯಪ್ಪನಹಳ್ಳಿಯಿಂದ ಮೆಳೇಕೋಟೆ 3 ಕಿ.ಮೀ.ಗೂ ಹೆಚ್ಚು ದೂರದಲ್ಲಿದೆ. ನಿಯಮದ ಪ್ರಕಾರ 3 ಕಿಮೀ ವ್ಯಾಪ್ತಿಯಲ್ಲಿರುವವರಿಗೆ ಅಂಗನವಾಡಿ ಶಿಕ್ಷಕಿ ಹುದ್ದೆ ಕೊಡಬೇಕು. ಆದರೆ, ಇಲ್ಲಿ ಬೇರೆ ಗ್ರಾಮದವರಿಗೆ ಕೊಟ್ಟಿರುವುದಕ್ಕೆ ನಮ್ಮ ಆಕ್ಷೇಪವಿದೆ. ಯಾರೂ ಜಾತಿ ತಾರತಮ್ಯ ಮಾಡುತ್ತಿಲ್ಲ. ದಲಿತರೆಂಬ ಕಾರಣ ನೀಡುತ್ತಿರುವುದರಲ್ಲಿ ಸತ್ಯವಿಲ್ಲ ಎಂದು ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ.
ನಿಯಾಮವಳಿಯಂತೆ ಮೇಳೆಕೋಟೆಗೆ ಶಿಕ್ಷಕಿಯಾಗಿ ನಿಯೋಜನೆ ಮಾಡಲಾಗಿದೆ, ಗ್ರಾಮದ ವಾಸದ ದೃಢೀಕರಣ ಸುಳ್ಳು ಎಂಬ ಗ್ರಾಮಸ್ಥರ ಮನವಿಯಂತೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ತಹಸೀಲ್ದಾರ್ ಅವರು ಮರುಪರಿಶೀಲನೆ ನಡೆಸಿದ್ದಾರೆ. ನಿಯೋಜನೆಯಲ್ಲಿ ಎಲ್ಲಿಯೂ ನಿಯಮ ಉಲ್ಲಂಘನೆಯಾಗಿಲ್ಲ. ಗ್ರಾಮಸ್ಥರು ಗ್ರಾಮದವರಿಗೆ ಅವಕಾಶ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಈ ಬಗ್ಗೆ ಮುಂದಿನ ಗ್ರಾಮಸಭೆಯಲ್ಲಿ ಚರ್ಚಿಸಲಾಗುವುದು.
ನಟರಾಜ್, ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ನನಗೆ ಯಾವುದೇ ಕೆಲಸ ಕೊಟ್ಟರೂ ಪ್ರಾಮಾಣಿಕವಾಗಿ ಮಾಡಲು ಸಿದ್ಧಳಿದ್ದೇನೆ. ನಾನು ದಲಿತ ಮಹಿಳೆ ಎಂಬ ಒಂದೇ ಕಾರಣಕ್ಕೆ ಕರ್ತವ್ಯ ನಿರ್ವಹಿಸಲು ಬಿಡುತ್ತಿಲ್ಲ. ಹಲವು ದಿನಗಳಿಂದ ಅಂಗನವಾಡಿ ಒಳಗೆ ಬಿಡದೆ ಬಾಗಿಲಿನಲ್ಲಿಯೇ ನಿಲ್ಲಿಸಿದ್ದಾರೆ, ಧೈರ್ಯ ಮಾಡಿ ಒಳಗೆ ಹೋದರೆ ಮಕ್ಕಳನ್ನು ಬೇರೆ ಅಂಗನವಾಡಿಗೆ ಕಳುಹಿಸುತ್ತಾರೆ.
ಆನಂದಮ್ಮ, ಮೇಳೆಕೋಟೆ ಅಂಗನವಾಡಿ ಶಿಕ್ಷಕಿ