

ಮೂಡಲಗಿ: ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ದಾಖಲಾತಿ ಹೊಂದುವುದು ಅವಶ್ಯ. ಈ ನಿಟ್ಟಿನಲ್ಲಿ ಮೆಳವಂಕಿಯ ಶಾಲೆಯು 728 ಮಕ್ಕಳನ್ನು ಹಾಗೂ 10 ಜನ ಶಿಕ್ಷಕರನ್ನು ಹೊಂದುವ ಮೂಲಕ ಮಾದರಿ ಶಾಲೆಯಾಗಿದೆ
ಎಂದು ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶಕುಮಾರ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದರು.
ಮೂಡಲಗಿ ಶೈಕ್ಷಣಿಕ ವಲಯದ ಮೆಳವಂಕಿಯ ಸಿದ್ಧಾರೂಢ ಮಠ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಡೇರಟ್ಟಿಯ ಸಮೂಹ ಸಂಪನ್ಮೂಲ ಕೇಂದ್ರ, ಕಸ್ತೂರಿ ಬಾ ಗಾಂಧಿ ಬಾಲಿಕೆಯರ ವಸತಿ ನಿಲಯ, ಸರ್ಕಾರಿ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಾಲೆಗಳಿಗೆ ಬುಧವಾರ ಭೇಟಿ ನೀಡಿದರು.
ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಕಾರ್ಯಚಟುವಟಿಕೆಗಳು, ಪಠ್ಯದ ಜತೆಗೆ ಸಹಪಠ್ಯ ಚಟುವಟಿಕೆಗಳು ಹಾಗೂ ಪೌಷ್ಟಿಕಾಂಶಯುಕ್ತ ಉಪಾಹಾರ ವ್ಯವಸ್ಥೆ ಉತ್ತಮವಾಗಿದೆ. ಮಕ್ಕಳ ಕಲಿಕೆಗೆ ಪೂರಕ ಚಟುವಟಿಕೆ
ಒದಗಿಸುವುದು ಅವಶ್ಯ ಎಂದರು. ಅತಿ ಹೆಚ್ಚು ದಾಖಲಾತಿ ಹೊಂದಿರುವ ಮೆಳವಂಕಿಯ ಸಿದ್ಧಾರೂಢ ಮಠ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಈರಣ್ಣ ಕಡಕೋಳ ಹಾಗೂ ಶಾಲಾ ಸಿಬ್ಬಂದಿಗೆ ಅಭಿನಂದನಾ ಪತ್ರ ನೀಡಿದರು.
ಅಪರ ಆಯುಕ್ತರಾದ ಜಯಶ್ರೀ ಶಿಂತ್ರಿ, ಆಕಾಶ, ಚಿಕ್ಕೋಡಿ ಡಿಡಿಪಿಯು ಪಾಂಡುರಂಗ ಭಂಡಾರೆ, ಧಾರವಾಡದ ಡಿಡಿಪಿಐ ಸಂಜೀವ ಬೆಂಗೇರಿ, ಬಿಇಒಗಳಾದ ಅಜೀತ ಮನ್ನಿಕೇರಿ, ಜಿ.ಬಿ ಬಳಗಾರ, ಮಧ್ಯಾಹ್ನ ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಎ.ಬಿ. ಮಲಬನ್ನವರ, ಸಿಆರ್‌ಪಿ ಎಂ.ಎಲ್. ಅಮಣಿ ಇದ್ದರು.