

ಮಧುಗಿರಿ: ತಾಲೂಕಿನಾದ್ಯಂತ ಜನತಾ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದೇ ಮೊದಲ ಬಾರಿಗೆ ಜನತೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಸದಾ ಜನ ಜಂಗುಳಿಯಿಂದ ತುಂಬಿಕೊಳ್ಳುತ್ತಿದ್ದ ಪಟ್ಟಣದ ಪ್ರಮುಖ ಬೀದಿಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಎಲ್ಲ ಅಂಗಡಿಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚುವ ಮೂಲಕ ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸಿದರು.
ಜನತೆ ಆರೋಗ್ಯದ ಹಿತದೃಷ್ಟಿಯಿಂದ ರಸ್ತೆಗಿಳಿಯದೇ ಮನೆಯಲ್ಲೇ ಉಳಿಯುವ ಮೂಲಕ ಕರೊನಾ ಹಿಮ್ಮೆಟ್ಟಿಸುವ ಪ್ರಯತ್ನಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ತಾಲೂಕಿನಾದ್ಯಂತ ಇದೇ ರೀತಿಯ ವಾತಾವರಣ ಕಂಡು ಬಂದಿದೆ. ಯಾವುದೇ ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಬಸ್ ನಿಲ್ದಾಣಗಳಲ್ಲಿ ಯಾವುದೇ ಪ್ರಯಾಣಿಕರೂ ಸಹ ಕಂಡು ಬರಲಿಲ್ಲ.
ಎಚ್ಚೆತ್ತುಕೊಂಡ ಪುರಸಭೆ: ವಿಜಯವಾಣಿಯಲ್ಲಿ ಭಾನುವಾರ ವರದಿ ಪ್ರಕಟವಾದ ನಂತರ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ. 7, 8, 13, 14ನೇ ವಾರ್ಡಿನಲ್ಲಿ ಚರಂಡಿಗಳಿಗೆ ಮತ್ತು ಮನೆ ಕಾಂಪೌಂಡ್‌ಗಳಿಗೆ ಮೆಲಸಿನ್ ದ್ರಾವಣ ಸಿಂಪಡಿಸಲಾಯಿತು. ಮುಂದಿನ ದಿನಗಳಲ್ಲಿ ಪಟ್ಟಣದ ಎಲ್ಲ ವಾರ್ಡ್‌ಗಳಲ್ಲೂ ಮೆಲಸಿನ್ ದ್ರಾವಣ ಸಿಂಪಡಿಸುವುದಾಗಿ ಹಿರಿಯ ಆರೋಗ್ಯ ನಿರೀಕ್ಷಕ ಬಾಲಾಜಿ ತಿಳಿಸಿದ್ದಾರೆ.
ಮಧುಗಿರಿ ತಾಲೂಕಿನ ಕೋಡಗದಾಲ ಗ್ರಾ ಪಂ ವ್ಯಾಪ್ತಿಯ ಗ್ರಾಮಗಳಲ್ಲಿ 5ಕ್ಕೂ ಹೆಚ್ಚು ಜನರು ಗುಂಪು ಗೂಡಬಾರದು ಹಾಗೂ ಪಕ್ಕದ ಗೌರಿಬಿದನೂರು ತಾಲೂಕಿನಲ್ಲಿ ಕರೊನಾ ಸೋಂಕಿತ ವ್ಯಕ್ತಿಗಳು ಕಂಡುಬಂದಿರುವುದರಿಂದ ಗೌರಿಬಿದನೂರು ತಾಲೂಕಿಗೆ ಯಾವ ವ್ಯಕ್ತಿಗಳು ಪ್ರಯಾಣ ಮಾಡಬಾರದು. ಗೌರಿಬಿದನೂರಿನಿಂದ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಬಂದರೆ ಅಂತಹ ವ್ಯಕ್ತಿಗಳ ಜತೆ ಸಂಪರ್ಕ ಹೊಂದುವಾಗ ಎಚ್ಚರಿಕೆ ವಹಿಸಿ ಕರೊನಾ ಹರಡದಂತೆ ತಡೆಯಲು ಸಾರ್ವಜನಿಕರು ಗ್ರಾ ಪಂನೊಂದಿಗೆ ಸಹಕರಿಸಿ. ರೂಪಾ ಪಿಡಿಒ ಕೋಡಗದಾಲ ಗ್ರಾಮ ಪಂಚಾಯಿತಿ