ಜಾನಪದ ಕಲೆಗಳ ಮೇಲೆ ಪಾಶ್ಚಿಮಾತ್ಯದ ಪ್ರಭಾವ

mela
Published on

ಮಡಿಕೇರಿ:

ಹಳ್ಳಿಯ ಜನರ ಜೀವನದಲ್ಲಿ ಹಾಸುಹೊಕ್ಕಾಗಿದ್ದ ಜಾನಪದ ಕಲೆ ಹಾಗೂ ನಾಟಕ ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯಿAದ ನಶಿಸಿ ಹೋಗುತ್ತಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಕುಶಾಲನಗರ ತಾಲೂಕು ಬಸವನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಯುವ ಸೌರಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ನಶಿಸಿ ಹೋಗುತ್ತಿರುವ ಕಲೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಯುವ ಸೌರಭ ಸಾಂಸ್ಕೃತಿಕ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಮತ್ತು ಯುವಜನಾಂಗ ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸದೊಂದಿಗೆ ಜಾನಪದ ಕಲೆ, ಭರತನಾಟ್ಯ ಹಾಗೂ ನಾಟಕಗಳನ್ನು ಕಲಿಸಬೇಕು. ಶಾಲೆಯಲ್ಲಿ ವರ್ಷಕೊಮ್ಮೆ ಇಂತಹ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದರೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಗ್ರಾಮೀಣ ಭಾಗದ ಕಲೆಗಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಕಲಾವಿದರು ತಮ್ಮ ಪ್ರತಿಭೆ ಪ್ರದರ್ಶಿಸಲು ಯುವ ಸೌರಭ ಸೂಕ್ತ ವೇದಿಕೆಯಾಗಿದೆ. ಕಲೆಗೆ ಯಾವುದೇ ಜಾತಿ, ಧರ್ಮ, ಭಾಷೆಯ ಸಂಕೋಲೆಯಿಲ್ಲ. ಇದು ಕಲಾವಿದನಲ್ಲಿ ಸೃಜನಶೀಲ ಹಾಗೂ ವ್ಯಕ್ತಿತ್ವದ ವಿಕಸನಕ್ಕೆ ಕಾರಣವಾಗಲಿದೆ. ರಾಜ್ಯದ ಜಾನಪದ ತತ್ವ ಪದಗಳು ವೈವಿದ್ಯಮಯವಾಗಿದ್ದು, ತನ್ನದೇ ಆದ ಐತಿಹ್ಯ ಹೊಂದಿವೆ. ಇದು ಕನ್ನಡ ನಾಡು, ನುಡಿ, ಸಂಸ್ಕೃತಿಯ ಸೊಗಡನ್ನು ಕಟ್ಟಿಕೊಡುತ್ತಿದೆ. ಕಾರ್ಯಕ್ರಮದ ಮೂಲಕ ಮತ್ತಷ್ಟು ಕಲಾವಿದರು ಹೊರಹೊಮ್ಮಲಿ. ಎಲ್ಲಾ ಕಲಾವಿದರಿಗೆ ಇದು ಪ್ರೇರಣೆಯಾಗಲಿ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಗು ಜಿಲ್ಲೆಯ ಸಹಾಯಕ ನಿರ್ದೇಶಕ ಕುಮಾರ್ ಕಾರ್ಯಕ್ರಮ ಕುರಿತು ಮಾತನಾಡಿದರು. ಗುಡ್ಡೆಹೊಸೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಸೌಮ್ಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪುರಸಭೆ ಸದಸ್ಯ ನವೀನ ಕುಮಾರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ನಾಗೇಶ್, ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ರೀದೇವಿ, ಗ್ರಾಮ ಪಂಚಾಯತಿ ಸದಸ್ಯರಾದ ನಾರಾಯಣ, ಶಾಲಾ ಪೋಷಕರ ಸಂಘದ ಅಧ್ಯಕ್ಷ ನಾಗೇಶ್ ಪೂಜಾರಿ, ಕಲಾವಿದ ಭರ್ಮಣ್ಣ ಬೆಟ್ಟಗೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕಾವೇರಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ.ಎನ್. ಚಂದ್ರಮೋಹನ್, ಕೇಂದ್ರ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರಘು ಮತ್ತಿತರರು ಇದ್ದರು.

ಬಸವನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದಲ್ಲಿ ನಡೆದ ಯುವ ಸೌರಭ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದ ಪ್ರೇಕ್ಷಕರ ಮನ ರಂಜಿಸಿತು. ನಾಪೋಕ್ಲುವಿನ ಸಮೀಕ್ಷಾ ಮತ್ತು ಸಂಗಡಿಗರು ಪ್ರದರ್ಶಿಸಿ ಭರತನಾಟ್ಯ, ಕುಶಾಲನಗರದ ಕಾಳಿಕಾ ದೇವಿ ಮತ್ತು ತಂಡ ಪ್ರಸ್ತುತ ಪಡಿಸಿದ ಸುಗಮ ಸಂಗೀತ, ಹಾಸನ ಜಿಲ್ಲೆಯ ತಟ್ಟೆಕೆರೆಯ ಉಷಾರಾಣಿ ಮತ್ತು ತಂಡದವರಿAದ ಪ್ರದರ್ಶನವಾದ ಕಂಸಾಳೆ ನೃತ್ಯ, ಹುಣಸೂರಿನ ಗಾವಡಗೆರೆಯ ಭರತ್ ಕುಮಾರ್ ಮತ್ತು ತಂಡದವರ ಡೊಳ್ಳುಕುಣಿತ ಹಾಗೂ ಮೈಸೂರಿನ ಎಸ್. ಸುದೀಪ್ ಸಂಗಡಿಗರು ಪ್ರದರ್ಶಿಸಿದ ಹಾಸ್ಯ ಭರಿತ ಆಳಿದ ಮಹಾಸ್ವಾಮಿಗಳು ನಾಟಕ ಎಲ್ಲರ ಗಮನ ಸೆಳೆಯಿತು. ನಂತರ ಯುವ ಸೌರಭದಲ್ಲಿ ಭಾಗವಹಿಸಿದ್ದ ಕಲಾವಿದರಿಗೆ ಶಾಸಕ ಡಾ.ಮಂತರ್ ಗೌಡ ಪ್ರಶಸ್ತಿ ಪತ್ರ ವಿತರಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net