ಭಕ್ತರ ಆರಾಧ್ಯ ದೈವ ಮೇಕೇರಿ ಗೌರಿಶಂಕರ

28adarshkdga1
Published on

ಆದರ್ಶ್ ಅದ್ಕಲೇಗಾರ್ ಮಡಿಕೇರಿ

ಸುತ್ತಲು ಹಸಿರ ಕಾನನದ ನಡುವೆ ಬೆಟ್ಟದ ತಪ್ಪಲಿನಲ್ಲಿ ಭಕ್ತರ ಹರಕೆ ನೀಗಿಸೋ ’ಶ್ರೀಗೌರಿಶಂಕರ’ ಮಡಿಕೇರಿ ತಾಲೂಕಿನ ಮೇಕೇರಿ ಗ್ರಾಮದಲ್ಲಿ ಕಳೆದ ೩೨ ವರ್ಷದಿಂದ ನೆಲೆನಿಂತಿದ್ದಾನೆ.


ಇತಿಹಾಸ: ಮೇಕೇರಿ ಗ್ರಾಮದಲ್ಲಿ ನಿತ್ಯ ಪೂಜೆಯಾಗುವ ದೇವಾಲಯ ಇಲ್ಲದೆ, ಧಾರ್ಮಿಕ ಕಾರ್ಯಕ್ಕಾಗಿ ದೂರದೂರಿಗೆ ಹೋಗಬೇಕಾದ ಕೊರತೆ ಇತ್ತು. ಈ ಅನಿವಾರ್ಯತೆಯನ್ನು ನೀಗಿಸಲು ದೇವಾಲಯ ನಿರ್ಮಿಸಲು ಯುವಕರು ಸಂಕಲ್ಪಗೈದು ಗ್ರಾಮದ ನಾಲ್ಕು ದಿಕ್ಕುಗಳಲ್ಲಿ ಸ್ಥಳಕ್ಕಾಗಿ ಪರಿಶೀಲನೆ ನಡೆಸಿದರು. ದೇವಾಲಯ ನಿರ್ಮಿಸಲು ಜಾಗಕ್ಕಾಗಿ ಹುಡುಕಾಟ ನಡೆಸುತ್ತಿರುವಾಗ ಪ್ರಸ್ತುತ ದೇವಾಲಯ ಸ್ಥಿತಿಗೈದಿರುವ ಸರ್ಕಾರಿ ಜಾಗ ಪರಬಾರೆ ಆಗದಿರುವುದು ತಿಳಿಯುತ್ತದೆ. ಆದರೆ, ಖಾಸಗಿ ಒಡೆತನದ ಆವರಣದೊಳಗೆ ಜಾಗವಿದ್ದರೂ ಸ್ಥಳಕ್ಕೆ ಹೋಗಲು ಜಾಗವಿರಲಿಲ್ಲ. ಸರ್ವೇಯವರನ್ನು ಕರೆಸಿದಾಗಲು ಹಲವು ಅಡೆತಡೆಗಳು ಉಂಟಾಗಿತ್ತು. ಸ್ಥಳ ಮಂಜೂರಾತಿಗಾಗಿ ಆರೇಳು ವರ್ಷ ಕಳೆದರೂ ಮಂಜೂರಾತಿ ಕೋರಿದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ವರ್ಷ ಕಳೆಯುದರೊಳಗೆ ೧೯೮೬ರಲ್ಲಿ ಶಿವಾನುಗ್ರಹದಂತೆ ದೇವಾಲಯ ನಿರ್ಮಿಸಲು ೩೦ ಸೆಂಟು ಜಾಗ ದೊರಕಿ, ಮಂಜೂರಾತಿ ಪತ್ರ ಕೈಸೇರಿತ್ತು.


ಆರಂಭದಲ್ಲಿ ೨೫ ರಿಂದ ೩೦ ಯುವಕರಿದ್ದ ತಂಡ ಕರಗಿ ಕರಗಿ ಬೆರಳೆಣಿಕೆಯಷ್ಟು ಮಾತ್ರ ಆಯಿತು. ದೇವಾಲಯ ನಿರ್ಮಾಣಕ್ಕಾಗಿ ಹಣಕಾಸಿನ ಹಾಗೂ ಜನರ ಪರಿಶ್ರಮದ ಅಗತ್ಯವಿತ್ತು. ಆದರು ದೇವಾಲಯ ನಿರ್ಮಾಣ ಕಾರ್ಯ ಮಾತ್ರ ನಿಲ್ಲಲಿಲ್ಲ. ಆರಂಭದಲ್ಲಿ ಗಣಪತಿ ಗರ್ಭಗುಡಿ ಮಾಡಿ, ವಾರಕ್ಕೋ ತಿಂಗಳಿಗೋ ಅರ್ಚಕರು ಪೂಜೆ ಮಾಡುವುದು ತಂಡದ ತೀರ್ಮಾನವಾಗಿತ್ತು. ಇದನ್ನು ಗ್ರಾಮದ ದಿ.ಶ್ರೀ ಸೀತಾರಾಮ ಶಾಸ್ತ್ರಿಗೆ ತಿಳಿಸಿ ದೇವಾಲಯಕ್ಕೆ ಗುತ್ತಿ ಹಾಕಲು ಕರೆತರಲಾಯಿತು.


ಸೀತಾರಾಮ ಶಾಸ್ತ್ರಿ ಸ್ಥಳ ಶುದ್ಧೀಕರಣ ಮಾಡಿ, ದೇವ ಪ್ರಶ್ನೆ ಇಟ್ಟು ಸರಿ ಸುಮಾರು ಅರ್ಧಗಂಟೆ ಕಣ್ಮುಚ್ಚಿ ಕುಳಿತು ಇಲ್ಲಿ ನೀವು ಅಭಿಪ್ರಾಯಪಟ್ಟ ದೇವಾಲಯ ನಿರ್ಮಾಣ ಸಾಧ್ಯವಿಲ್ಲ. ಇಲ್ಲಿ ಪಾರ್ವತಿ ಸಹಿತ ಪರಮೇಶ್ವರನ ದಿವ್ಯ ಸಾನಿಧ್ಯವಿದೆ. ಅನಾದಿಕಾಲದಲ್ಲಿ ಭೃಂಗ ಋಷಿ ಭರತಖಂಡವನ್ನೆಲ್ಲ ಸುತುತ್ತಾ, ದಕ್ಷಿಣ ತಟದ ಕಾವೇರಿ ಮಾತೆಯ ದರ್ಶನವಾಗಿ ಪಶ್ವಿಮ ಘಟ್ಟದ ಗೊಂಡಾರಣ್ಯದಲ್ಲಿ ಬರುತ್ತಿದ್ದಾಗ, ಈ ಸ್ಥಳದಲ್ಲಿ ಯಾವುದೋ ಮಾಯೆ ಆವರಿಸಿದಂತಾಗಿ ಇಲ್ಲಿ ಕುಳಿತು ತಪಗೈದು ಪಾರ್ವತಿ ಸಹಿತ ಪರಮೇಶ್ವರನನ್ನು ಸಾಕ್ಷಾತ್ಕಾರಗೊಳಿಸಿ ಮತ್ತೆ ಕಾವೇರಿ ಉಗಮ ಸ್ಥಾನದತ್ತ ತೆರಳಿದರು ಎಂದು ದೇವಾಲಯದ ಈಗಿನ ಅರ್ಚಕರಾದ ಅಂಗಿತಾಯ ಕೃಷ್ಣ ಹೇಳುತ್ತಾರೆ.


ಸೀತಾರಾಮ ಶಾಸ್ತ್ರಿಗಳು ಯುವಕರ ತಂಡವನ್ನು ಮನೆಗೆ ಬರಲು ಹೇಳಿ, ನಿಮ್ಮ ಸಂಕಲ್ಪ ದೀಕ್ಷೆ ಸಾಕಾರವಾಗಲಿದೆ. ಅಲ್ಲಿ ಶಿವ ದೇವಾಲಯ ಹಾಗೂ ಇತರೆ ವ್ಯವಸ್ಥೆ ಆಗಲಿದೆ. ಸಾಕ್ಷಾತ್ ಪರಮಾತ್ಮನ ಅನುಗ್ರಹವಾಗಿದೆ. ನೀವು ಧೈರ್ಯವಾಗಿ ಮುಂದಡಿಯಿಡಬಹುದು. ಸಕಲವೂ ನಡೆದು ೧೯೯೦ರಲ್ಲಿ ಪ್ರತಿಷ್ಠಾಪನೆ ಆಗಲಿದೆ ಎಂದರು. ನಂತರ ಮುಂದೆ ಪವಾಡ ಸದೃಶ್ಯದಂತೆ ದೇವಾಲಯ ಕಾರ್ಯ ನಡೆಯಿತು ಎಂದು ಅರ್ಚಕ ಅಂಗಿತಾಯ ಕೃಷ್ಣ ಇತಿಹಾಸವನ್ನು ಮೆಲುಕು ಹಾಕುತ್ತಾರೆ.

ಗಣಪತಿ ದೇವಸ್ಥಾನ ಬದಲು ಶಿವಾಲಯ ನಿರ್ಮಾಣ
ಸೀತಾರಾಮ ಶಾಸ್ತ್ರಿ ದೇವ ಪ್ರಶ್ನೆಯಿಟ್ಟ ಸಂದರ್ಭದಲ್ಲಿ ಗಣಪತಿ ದೇವಾಲಯದ ನಿರ್ಮಾಣ ಸಾಧ್ಯವಿಲ್ಲ ಶಿವ ದೇವಾಲಯವೇ ಆಗಬೇಕು ಎಂಬುದನ್ನು ದೇವಾಲಯ ಸ್ಥಾಪಿಸಲು ಹೊರಟ ಯುವಕರಿಗೆ ತಿಳಿಸಿದರು. ಆದರೊಂದಿಗೆ ಶಿವಗಣಗಳಾದ ಗಣಪತಿ, ಸುಬ್ರಮಣ್ಯ, ನಂದಿ ನಾಗದೇವತೆಗಳನ್ನು ಪ್ರತಿಷ್ಠಾಪಿಸಬೇಕು. ಈಶ್ವರಾಧಾನೆಗೆ ನಿತ್ಯ ಅನ್ನ, ನೈವೇಧ್ಯ ಮಂಗಳಾರತಿಯಾಗಬೇಕು. ನೈವೇಧ್ಯಯ ತಯಾರಿಸಲು ಪ್ರತ್ಯೇಕ ಕೊಠಡಿ, ನಿತ್ಯ ಶಾಂತಿಗೆ ಒರ್ವ ಅರ್ಚಕ ಸೇರಿದಂತೆ ಇತರೆ ವ್ಯವಸ್ಥೆ ಹಾಗೂ ವಾರ್ಷಿಕ ಮಹಾಶಿವರಾತ್ರಿ ಉತ್ಸವ ಆಚರಿಸಬೇಕು ಎಂದು ಅಂದು ತಿಳಿಸಿದ್ದರು. ಅಂತೆಯೇ ಇಂದು ಕೂಡ ನಡೆಯುತ್ತಿದೆ.

ದೇವಾಲಯ ಲೋಕಾರ್ಪಣೆ
ಅಂತಿಮವಾಗಿ ದೇವಾಲಯ ನಿರ್ಮಾಣ ಪೂರ್ತಿಯಾಗಿ ೧೯೯೦ ಮೇ.೨೯ ರಿಂದ ಜೂ.೨ರವರೆಗೆ ಶ್ರೀ ಗೌರಿ ಶಂಕರ ಮಹಾಲಿಂಗ, ನಂದಿವಾಹನ, ಶ್ರೀ ಮಹಾಗಣಪತಿ, ಶ್ರೀ ಸುಬ್ರಮಣ್ಯ ಹಾಗೂ ನಾಗ ದೇವತೆಯ ಪ್ರತಿಷ್ಠಾಪನಾ ವಿಧಿ ವಿಧಾನಗಳ ದೇವತಾರಾಧನೆ ನಡೆದು ತಂತ್ರಿಗಳಾದ ಬ್ರಹ್ಮಶ್ರೀ ವೇದ ಮೂರ್ತಿ, ಶ್ರೀ ಸೀತಾರಾಮ ಶಾಸ್ತ್ರಿ ಮತ್ತು ವೃಂದದವರು ಶ್ರೀ ಗೌರಿ ಶಂಕರ ದೇವಲಯವನ್ನು ಲೋಕಾರ್ಪಣೆಗೈದರು.

ಹೊರೆಕಾಣಿಕೆ
ಶಿವರಾತ್ರಿಯ ದಿನದಂದು ಈಶ್ವರನಿಗೆ ವಿಶೇಷ ಆರಾಧನೆಯಾಗಿ ಹೊರೆಕಾಣಿಕೆ ಎಂಬ ಅತ್ಯಂತ ಶ್ರದ್ಧಾಭಕ್ತಿಯಿಂದ ಸೇವೆಯನ್ನು ಮಾಡಲಾಗುತ್ತದೆ. ಇದರಲ್ಲಿ ಗ್ರಾಮದ ಪ್ರತೀ ಮನೆಯವರು ಪಾಲ್ಗೊಳ್ಳುತ್ತಾರೆ. ಅಂದು ಮಹಾಗಣಪತಿಹೋಮ, ಹೊರೆಕಾಣಿಕೆ ಸಮರ್ಪಣೆ, ಮಾಹಾಪೂಜೆ, ಗೋದೂಳಿ ಪೂಜೆ, ದೀಪಾಲಂಕಾರ ಪೂಜೆ, ರಂಗಪೂಜೆ, ಜಾಗರಣೆ ಪ್ರಯುಕ್ತ ಯಕ್ಷಗಾನ ಪ್ರದರ್ಶನ ನಡೆಯುತ್ತವೆ. ಸೋಮವಾರ ಹಾಗೂ ಶನಿವಾರ ವಿಶೇಷ ಪೂಜೆ ನಡೆಯಲಿದ್ದು, ದಿನನಿತ್ಯ ರುದ್ರಾಭಿಷೇಕ, ಮಹಾಗಣಪತಿ ಪೂಜೆ, ನಾಗಪೂಜೆ, ನವಗ್ರಹ ಪೂಜೆ, ಕ್ಷೀರಾಭಿಶೇಷ, ಕುಂಕುಮಾರ್ಚನೆ, ಬಿಲ್ವಾಪತ್ರಾರ್ಚನೆ, ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದೆ. ದೇವಾಲಯದಲ್ಲಿ ಈಶ್ವರ ಪಾರ್ವತಿ ಇರುವುದರಿಂದ ಭಕ್ತರು ಮದುವೆಯ ಹರಕೆಗಳನ್ನು ಹೊರುವುದು ಇಲ್ಲಿನ ವಿಶೇಷ.

೧ ಕೋಟಿಯಲ್ಲಿ ಜೀಣೋದ್ಧಾರ
ಸುಮಾರು ೧ ಕೋಟಿ ರೂ ವೆಚ್ಚದಲ್ಲಿ ದೇವಾಲಯದ ಜೀಣೋದ್ಧಾರ ಮಾಡಲಾಗಿದೆ. ನೂತನವಾಗಿ ಮಂಟಪಗಳನ್ನು ಕಲ್ಲಿನ ಕೆತ್ತನೆಯಿಂದ ನಿರ್ಮಿಸಲಾಗಿದೆ. ಜತೆಗೆ ದೇವಾಲಯಕ್ಕೆ ಬೋಜನಶಾಲೆಯನ್ನು ಸುಮಾರು ೨೦ ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ದೇವಾಲಯದ ಟ್ರಸ್ಟ್‌ನ ಕಾರ್ಯದರ್ಶಿ ಪಿ.ಕೆ.ವೇಲಾಯುಧನ್ ತಿಳಿಸಿದರು.

ಮಾರ್ಗ
ಬೆಂಗಳೂರಿನಿಂದ ಆಗಮಿಸುವವರು ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ವಿರಾಜಪೇಟೆ-ಗೋಣಿಕೊಪ್ಪ ರಾಜ್ಯ ಹೆದ್ದಾರಿ ಮೂಲಕ ಸುಮಾರು ೫ ಕಿ.ಮಿ. ತೆರಳಬೇಕು. ಮಂಗಳೂರಿನಿಂದ ಆಗಮಿಸುವವರು ತಾಳತ್ತಮನೆ ವೃತ್ತದಿಂದ ಬಲಭಾಗವಾಗಿ ೨ ಕಿ.ಮೀ. ಮೇಕೇರಿಗೆ ಆಗಮಿಸಬೇಕು.


ಹೆಚ್ಚಿನ ಭಕ್ತರು ತಮ್ಮ ಬೇಡಿಕೆ ಈಡೇರಿಕೆಗಾಗಿ ದೇವಸ್ಥಾನದಲ್ಲಿ ಹರಕೆ ಹೊತ್ತು ತೆರಳುತ್ತಾರೆ. ನಂತರ ಬೇಡಿಕೆಗಳು ಈಡೇರಿದ ಭಕ್ತರು ಬಂದು ತಮ್ಮ ಹರೆಕೆಗಳನ್ನು ತೀರಿಸುತ್ತಾರೆ. ಶಿವರಾತ್ರಿಯಂದು ವಿಶೇಷ ಪೂಜೆ ನಡೆಯುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುತ್ತಾರೆ.
-ಅಂಗಿತಾಯ ಕೃಷ್ಣ, ಅರ್ಚಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net