

ನಾಗಮಂಗಲ: ಜಿಲ್ಲೆಯ ರೈತರಿಗೆ ನನ್ನ ರಾಜಕೀಯ ಜೀನವದಲ್ಲಿ ಅಲ್ಪ ಸ್ವಲ್ಪ ಕಾಣಿಕೆ ಕೊಟ್ಟಿದ್ದೇನೆ ಎನ್ನುವುದು ನಿಮ್ಮ ಹೃದಯದಲ್ಲಿದ್ದರೆ, ಈ ಚುನಾವಣೆಯಲ್ಲಿ ನನಗೆ ಹಾಲನ್ನಾದರೂ ಕೊಡಿ, ವಿಷವನ್ನಾದರೂ ಕೊಡಿ. ಎರಡನ್ನೂ ಸಮಚಿತ್ತವಾಗಿ ಸ್ವೀಕರಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಮಂಡ್ಯ ಲೋಕಸಭಾ ಚುನಾವಣೆಯ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಕಾರ್ಯಕರ್ತರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನರು ತಮಗೆ ಆಶೀರ್ವಾದ ಮಾಡಿದ ಕೆಲವೇ ತಿಂಗಳಲ್ಲಿ ಮೇಕೆದಾಟು ಯೋಜನೆಯನ್ನು ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಿ, ಅಣೆಕಟ್ಟೆ ನಿರ್ಮಾಣ ಮಾಡಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಮೇಕೆದಾಟು ಯೋಜನೆ ಬಗ್ಗೆ ವೀರಾವೇಶದ ಮಾತುಗಳನ್ನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಪಕ್ಕದ ರಾಜ್ಯದ ಸ್ನೇಹಿತರು ಹಾಗೂ ಡಿಎಂಕೆ ಪಕ್ಷದ ನಾಯಕ ಸ್ಟಾಲೀನ್ ಬಳಿ ಮೇಕೆದಾಟು ಯೋಜನೆಗೆ ಒಪ್ಪಿಗೆ ಪಡೆದುಕೊಂಡು ಬರಲಿ, ನಾನು ಪ್ರಧಾನಿ ಬಳಿ ಎರಡು ಸೆಕೆಂಡ್‌ಗಳಲ್ಲಿ ಅನುಮತಿ ಕೊಡಿಸುತ್ತೇನೆ. ಇದು ಇವರ ಕೈಯಲ್ಲಿ ಆಗುತ್ತಾ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿ ಪಿಕ್ ಪ್ಯಾಕೇಟ್ ಸರ್ಕಾರ ಅಧಿಕಾರದಲ್ಲಿದ್ದು, ಇದು ರಾಜ್ಯದ ಜನರ ಉದ್ದಾರ ಮಾಡಲ್ಲ. ಕಳೆದ 10 ತಿಂಗಳಿಂದ ಸರ್ಕಾರದ ಖಜಾನೆಯನ್ನು ಲೂಟಿ ಮಾಡಿ ರಾಜ್ಯದ ಜನರಿಗೆ ಚೊಂಬು ತೋರುತ್ತಿದ್ದು, ರೈತ ವಿರೋಧಿ ಸರ್ಕಾರ. ನಾನು ಮಂಡ್ಯ ಜಿಲ್ಲೆಗೆ ಅಭ್ಯರ್ಥಿಯಾಗಬೇಕು ಅಂದುಕೊಂಡಿರಲಿಲ್ಲ. ದೈವೇಚ್ಚೆ ಆಗಿದ್ದೇನೆ. ಜಿಲ್ಲೆಯಲ್ಲಿ ಜೆಡಿಎಸ್ ಮುಗಿಸಲೇಬೇಕೆಂದು ಕಾಂಗ್ರೆಸ್ ನಾಯಕರು ಸಂಚು ರೂಪಿಸುತ್ತಿದ್ದಾರೆ. ಜಿಲ್ಲೆಯ ರೈತರು ಮತ್ತು ಜೆಡಿಎಸ್ ಕಾರ್ಯಕರ್ತರನ್ನು ಉಳಿಸಿಕೊಳ್ಳದಿದ್ದರೆ ಜೀವನದಲ್ಲಿ ಸಂಪೂರ್ಣವಾಗಿ ನೆಲಕಚ್ಚುತ್ತೇವೆಂಬ ಭಯದಲ್ಲಿ ನಾನು ಪಣತೊಟ್ಟು ನಿಮ್ಮ ಮುಂದೆ ನಿಂತಿದ್ದೇನೆ. ನಮ್ಮ ಪಕ್ಷದ ಅಳಿವು ಉಳಿವಿನ ಪ್ರಶ್ನೆ ಇದು. ಕಳೆದ 17ವರ್ಷಗಳಲ್ಲಿ 3ಬಾರಿ ಹೃದಯ ಶಸ್ತ್ರ ಚಿಕಿತ್ಸೆಗೊಳಗಾಗಿದ್ದೇನೆ. ಕಾವೇರಿ ಸೇರಿದಂತೆ ಜಿಲ್ಲೆಯ ಹಲವಾರು ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಜಿಲ್ಲೆಯ ಜನತೆ ಯಾವುದೇ ಆಸೆ ಆಮಿಷಕ್ಕೆ ಬಲಿಯಾಗದೆ ನನಗೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಸುರೇಶ್‌ಗೌಡ ಮಾತನಾಡಿ, ಸರ್ಕಾರ ಗಂಡನ ಹಣ ಕಿತ್ತು ಹೆಂಡ್ತಿಗೆ ನೀಡುತ್ತಿದೆ. ಆದ್ದರಿಂದ ಮಹಿಳೆಯರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗೆ ಆಸೆ ಬೀಳದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕು. ಕೃಷಿ ಮಂತ್ರಿ ಹಣ ಬಲದಿಂದ ಹೀಗೆ ಆಡುತ್ತಿದ್ದಾರೆ, ಹಣ ಬಲವೋ, ಜನ ಬಲವೋ ಎಂಬುದು ಏ.26ರಂದು ಗೊತ್ತಾಗುತ್ತದೆ. ಜಿಲ್ಲಾ ಮಂತ್ರಿಯ ದುರಂಕಾರ ಮುರಿಯಲು ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರೆತರಲು ನನಗೆ ಕಾಂಗ್ರೆಸ್ ಮುಖಂಡರೇ ಹೇಳಿದ್ದರು. ಆದ್ದರಿಂದ ನಾವೆಲ್ಲ ಸೇರಿ ಕುಮಾರಣ್ಣನನ್ನು ಮಂಡ್ಯಕ್ಕೆ ಕರೆತದಿದ್ದೇವೆ ಎಂದರು.
ಡಾ.ರವೀಂದ್ರ ಮಾತನಾಡಿದರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ವಿಧಾನ ಪರಿಷತ್ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಲು, ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ, ಸಮಾಜ ಸೇವಕ ಮಲ್ಲಿಕಾರ್ಜುನ್ (ಫೈಟರ್ ರವಿ), ಮನ್‌ಮುಲ್ ನಿರ್ದೇಶಕ ಕೋಟಿ ರವಿ, ಜಿಪಂ ಮಾಜಿ ಸದಸ್ಯರಾದ ಮುತ್ತಣ್ಣ, ಶಿವಪ್ರಕಾಶ್, ಚಂದ್ರಣ್ಣ, ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ನಾರಾಯಣಮೂರ್ತಿ, ಮುಖಂಡರಾದ ಡಿ.ಟಿ.ಶ್ರೀನಿವಾಸ್, ನಾಗೇಶ್, ರಾಮು ಸೇರಿದಂತೆ ಹಲವರು ಇದ್ದರು.