

ಅನ್ಸಾರ್ ಇನೋಳಿ ಉಳ್ಳಾಲ
ಗ್ರಾಪಂ ಚುನಾವಣೆ ಬಳಿಕ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ನಿರೀಕ್ಷೆಯೂ ಮುಗಿದಿದ್ದು ಕೊಣಾಜೆ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತರಿಗೆ ಬಹುಮತವಿದ್ದರೂ ಅಧ್ಯಕ್ಷ ಸ್ಥಾನದ ಭಾಗ್ಯ ಲಭಿಸದಿರುವುದು ಆ ಪಾಳಯದಲ್ಲಿ ಬೇಸರ ಮೂಡಿಸಿದೆ.
ಉಳ್ಳಾಲ ವ್ಯಾಪ್ತಿಯಲ್ಲಿ ಮುನ್ನೂರು, ಅಂಬ್ಲಮೊಗರು, ಹರೇಕಳ, ಕೊಣಾಜೆ, ಪಾವೂರು, ಮಂಜನಾಡಿ, ಕಿನ್ಯ, ತಲಪಾಡಿ, ಬೋಳಿಯಾರ್, ನರಿಂಗಾನ, ಇರಾ, ಬಾಳೆಪುಣಿ, ಕುರ್ನಾಡು ಮತ್ತು ಪಜೀರು ಗ್ರಾಮಗಳಿವೆ. ಮುನ್ನೂರು, ಪಾವೂರಿನಲ್ಲಿ ಮೈತ್ರಿ ಅನಿವಾರ್ಯ. ಮೀಸಲಾತಿ ಸಂದರ್ಭ ಏಕೈಕ ಅಭ್ಯರ್ಥಿಯಿರುವ ಜಾತಿಗೇ ಮೀಸಲಾತಿ ಬಂದರೆ ಸ್ಪರ್ಧೆ, ಗೊಂದಲವಿಲ್ಲದೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಬಹುದು ಎಂಬ ನಿರೀಕ್ಷೆ ಇತ್ತಾದರೂ ಅದು ಈಡೇರಿಲ್ಲ.
ತೆರೆಮರೆಯಲ್ಲಿ ಯತ್ನ: ಸ್ಪರ್ಧೆ ನೀಡುವಂಥ ಮೀಸಲಾತಿಯೇ ಬಂದಿದ್ದು, ಮೈತ್ರಿ ಅನಿವಾರ್ಯ ಇರುವ ಕಡೆ ಅಧಿಕಾರಕ್ಕೇರುವ ಬಗ್ಗೆಯೂ ವಿವಿಧ ಪಕ್ಷದ ಮುಖಂಡರು ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಇದೇ ವೇಳೆ ಅದ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೂ ಆಕಾಂಕ್ಷಿಗಳು ಹೆಚ್ಚಿದ್ದು, ಒಂದೊಮ್ಮೆ ಅಭ್ಯರ್ಥಿ ಆಯ್ಕೆ ಸಂದರ್ಭ ಕಿಂಚಿತ್ ಎಡವಿದರೂ ಸ್ವಪಕ್ಷೀಯರೇ ಕೈಕೊಡುವ ಆತಂಕವೂ ಇದೆ. ಇಂಥ ಪ್ರಸಂಗ 2015ರಲ್ಲಿ ನರಿಂಗಾನದಲ್ಲಿ ನಡೆದಿತ್ತು.
ಅವಿರೋಧ ಆಯ್ಕೆಯೊಂದೇ ದಾರಿ: ಕೊಣಾಜೆ ಪಂಚಾಯಿತಿಗೆ ಬಂದಿರುವ ಅಧ್ಯಕ್ಷ ಮೀಸಲಾತಿ ಕಾಂಗ್ರೆಸ್‌ಗೆ ಖುಷಿ ಕೊಟ್ಟರೆ ಬಿಜೆಪಿಗೆ ಶಾಕ್ ನೀಡಿದೆ. ಇಲ್ಲಿ ಪರಿಶಿಷ್ಟ ಜಾತಿ ಮಹಿಳೆಗೆ ಅಧ್ಯಕ್ಷ ಸ್ಥಾನ ಒಲಿದಿದೆ. ಪೂರ್ಣ ಬಹುಮತ ಇರುವ ಬಿಜೆಪಿಯ ಅಧಿಕಾರದ ಕನಸಿಗೆ ಅಡ್ಡಿಯಾಗಿದೆ. ಈ ಮೀಸಲಾತಿಗೆ ಕಾಂಗ್ರೆಸ್ ಬೆಂಬಲಿತ ಚಂಚಲಾಕ್ಷಿ ಏಕೈಕ ಅಭ್ಯರ್ಥಿ! ಇಲ್ಲಿ ಯಾವುದೇ ಗೊಂದಲವಿಲ್ಲದೆ ಅವಿರೋಧ ಆಯ್ಕೆಯೊಂದೇ ದಾರಿಯಾದರೂ ಬಿಜೆಪಿ ಮಟ್ಟಿಗೆ ಬೇಸರದ ವಿಚಾರ. ಮತ ಎಣಿಕೆ ದಿನವೂ ಕೊಣಾಜೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಯಿಸಿದ್ದರೂ, ಬಳಿಕ ಮರುಮತ ಎಣಿಕೆಯಲ್ಲಿ ಗೆದ್ದ ಅಭ್ಯರ್ಥಿ ಸೋತು ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಅದೃಷ್ಟ ಒಲಿದಿತ್ತು. ಈ ವಿಚಾರವೂ ಭಾರಿ ವಿವಾದ ಮತ್ತು ಕುತೂಹಲಕ್ಕೆ ಕಾರಣವಾಗಿತ್ತು. ಸದ್ಯ ಮೀಸಲಾತಿ ವಿಚಾರವೂ ಮತ್ತೊಮ್ಮೆ ಕುತೂಹಲಕ್ಕೆ ಕಾರಣವಾಗಿದೆ.
ಸರ್ಕಾರದ ನಿಯಮದಂತೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕ್ರಿಯೆ ನಡೆದಿದೆ. ಕೊಣಾಜೆಯಲ್ಲಿ ನಮಗೆ ಬಹುಮತ ಇದ್ದರೂ ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನ ತಪ್ಪಿದೆ. ಈ ಬಗ್ಗೆ ಮುಂದೆ ಏನು ಮಾಡಬೇಕೆನ್ನುವ ಬಗ್ಗೆ ಪಕ್ಷ ಮುಖಂಡರಲ್ಲಿ ಚರ್ಚಿಸಿ ಅವರ ಮಾರ್ಗದರ್ಶನದಂತೆ ನಡೆದುಕೊಳ್ಳುತ್ತೇವೆ. ಚಂದ್ರಹಾಸ್ ಪಂಡಿತ್‌ಹೌಸ್ ಬಿಜೆಪಿ ಮಂಡಲಾಧ್ಯಕ್ಷ