ರೈತರ ಕೈಗೆ ಮೇಘದೂತ್ ಆ್ಯಪ್

doot
Published on

- ಅವಿನ್ ಶೆಟ್ಟಿ ಉಡುಪಿ

ಹವಾಮಾನ ಪರಿಣಾಮಗಳ ಕುರಿತು ರೈತರಲ್ಲಿ ಜಾಗೃತಿ ಮೂಡಿಸಿ, ವಿವಿಧ ಹಂತದ ಹವಾಮಾನ ಮುನ್ಸೂಚನೆ ನೀಡುವ ಜತೆಗೆ ಕೃಷಿಯನ್ನು ಲಾಭದಾಯಕವಾಗಿ ಮಾಡಲು, ಕೃಷಿಕರಿಗೆ ಸಂಯೋಜಿತ ಕೃಷಿಯ ಸಲಹೆ ನೀಡುವ ಮಹತ್ವಕಾಂಕ್ಷೆಯೊಂದಿಗೆ ಕೇಂದ್ರ ಸರ್ಕಾರ ಮೇಘದೂತ್ ತಂತ್ರಾಂಶವನ್ನು (ಆ್ಯಪ್)ಅಭಿವೃದ್ಧಿಪಡಿಸಿದೆ. ರೈತನ ಬೆರಳ ತುದಿಗೆ ಮಾಹಿತಿ ನೀಡುವ ಸಲುವಾಗಿ ಭಾರತೀಯ ಹವಾಮಾನ ಇಲಾಖೆ ಕೇಂದ್ರ ಸರ್ಕಾರದ ಕೃಷಿ ಮತ್ತು ಭೂ ವಿಜ್ಞಾನ ಸಚಿವಾಲಯ ನೆರವಿನೊಂದಿಗೆ ಭಾರತೀಯ ಕೃಷಿ ಅನುಸಂಧಾನ ಪರಿಷತ್, ಭಾರತೀಯ ಉಷ್ಣವಲಯ ಹವಾಮಾನ ಸಂಸ್ಥೆ, ಅಂತಾರಾಷ್ಟ್ರೀಯ ಅರೆ ಉಷ್ಣವಲಯ ಬೆಳೆ ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಈ ತಂತ್ರಾಂಶ ಮೂಲಕ ಕೇಂದ್ರೀಕೃತ ಮಾಹಿತಿ ರವಾನೆ ಮಾಡುವ ಉದ್ದೇಶದಿಂದ ಮಾಹಿತಿ ನವೀಕರಿಸುವ ಜವಾಬ್ದಾರಿಯನ್ನು ಆಯಾ ಜಿಲ್ಲಾ ವ್ಯಾಪ್ತಿಯ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳಿಗೆ ವಹಿಸಲಾಗಿದೆ.

ವಿವಿಯ ಗ್ರಾಮೀಣ ಕೃಷಿ ಮೌಸಮ್ ಸೇವಾ ವಿಭಾಗದಲ್ಲಿರುವ ನೋಡಲ್ ಅಧಿಕಾರಿ ಹಾಗೂ ತಾಂತ್ರಿಕ ಅಧಿಕಾರಿಗೆ ಇದರ ಹೊಣೆ ವಹಿಸಲಾಗಿದೆ. ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿರುವ ಗ್ರಾಮೀಣ ಕೃಷಿ ಮೌಸಮ್ ಸೇವಾ ವಿಭಾಗದಿಂದ ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಿಗೆ ಮಾಹಿತಿ ರವಾನೆಯಾಗಲಿದೆ.

10 ಭಾಷೆಗಳಲ್ಲಿ ಮಾಹಿತಿ ಲಭ್ಯ: ರಾಜ್ಯದ 30 ಜಿಲ್ಲೆ ಸಹಿತ ದೇಶದ ಒಟ್ಟು 150ಕ್ಕೂ ಹೆಚ್ಚು ಜಿಲ್ಲೆಗಳ ರೈತರಿಗೆ ವಾತಾವರಣ ಆಧರಿತ ಕೃಷಿ ಕೈಗೊಳ್ಳಲು ಸ್ಥಳೀಯ ಭಾಷೆಯಲ್ಲಿ ಮಾಹಿತಿ ಸಿಗುವುದು ಈ ತಾಂತ್ರಾಂಶದ ವಿಶೇಷತೆಯಾಗಿದೆ. ರೈತರು ಕನ್ನಡ, ತೆಲುಗು, ಮರಾಠಿ, ತಮಿಳು, ಹಿಂದಿ, ಇಂಗ್ಲಿಷ್ ಸೇರಿದಂತೆ 10 ಭಾಷೆಗಳಲ್ಲಿ ಮಾಹಿತಿ ಪಡೆಯಬಹುದು. ಈ ತಂತ್ರಾಂಶದಿಂದ ರೈತರಿಗೆ ವಾರದಲ್ಲಿ ಎರಡು ಬಾರಿ (ಮಂಗಳವಾರ ಮತ್ತು ಶುಕ್ರವಾರ)ವಾತಾವರಣದ ಅಂಶಗಳಾದ ಉಷ್ಣಾಂಶ, ಆದ್ರತೆ, ಮಳೆ, ಮೋಡ, ಗಾಳಿಯ ದಿಕ್ಕು, ಮತ್ತು ವೇಗದ ಮುನ್ಸೂಚನೆ ಮತ್ತು ಕೃಷಿ ಹವಾಮಾನ ಮುನ್ಸೂಚನೆ ಘಟಕಗಳು ಜಿಲ್ಲೆಯ ಬೆಳೆಯ ಅನುಗುಣವಾಗಿ ನೀಡುವ ಸಲಹೆ ಪಡೆಯಬಹುದು ಎಂದು ಕೇಂದ್ರದ ನೋಡಲ್ ಅಧಿಕಾರಿ ಕೆ.ವಿ ಸುಧೀರ್ ಕಾಮತ್ ತಿಳಿಸಿದರು.

ಆ್ಯಪ್ ವಿಶೇಷತೆಗಳೇನು?: ಹಿಂದಿನ 10 ದಿನಗಳ ಹವಾಮಾನ ವರದಿಯ ಮಾಹಿತಿ ಪಡೆಯಬಹುದು. ಪ್ರತಿ ದಿನದ ಗರಿಷ್ಠ ಮತ್ತು ಕನಿಷ್ಟ ತಾಪಮಾನ ಹಾಗೂ ಮಳೆಯ ಪ್ರಮಾಣ ಕುರಿತಾದ ಮಾಹಿತಿ ಲಭ್ಯ. ಮುಂದಿನ 5 ದಿವಸಗಳ ಗರಿಷ್ಠ ಮತ್ತು ಕನಿಷ್ಟ ತಾಪಮಾನ, ಆದ್ರತೆ, ಮಳೆಯ ಪ್ರಮಾಣ, ಮೋಡಗಳ ಮಾಹಿತಿ, ಗಾಳಿಯ ದಿಕ್ಕು ಮತ್ತು ವೇಗಗಳ ಮುನ್ಸೂಚನೆ ಮಾಹಿತಿ ಪಡೆಯಬಹುದು. ಈ ಮಾಹಿತಿಯಿಂದ ರೈತರು ಕೃಷಿ ಚಟುವಟಿಕೆಗಳನ್ನು ಆಯಾ ಹವಾಮಾನಕ್ಕೆ ಅನುಗುಣವಾಗಿ ಯೋಜನೆಯನ್ನು ರೂಪಿಸಿಕೊಳ್ಳಬಹುದು.

ಆ್ಯಪ್ ಬಳಕೆ ಹೇಗೆ?

ಗೂಗಲ್ ಪ್ಲೇಸ್ಟೋರ್‌ನಿಂದ ಮೇಘದೂತ್ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಆ್ಯಪನ್ನು ಡೌನ್‌ಲೋಡ್ ಮಾಡಿದ ನಂತರ ನೊಂದಣಿ ಮಾಡಲು ಭಾಷೆಯ ಆಯ್ಕೆ, ಹೆಸರು, ದೂರವಾಣಿ ಸಂಖ್ಯೆ, ರಾಜ್ಯ ಮತ್ತು ಜಿಲ್ಲೆಯನ್ನು ಆಯ್ಕೆ ಮಾಡಿ ಅನಂತರ ನೋಂದಣಿ ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ ನೀವು ನೋಂದಣಿಯಾಗಿದ್ದೀರಿ ಎಂದು ಮೊಬೈಲ್ ಪರದೆ ಮೇಲೆ ಹೆಸರು ಮೂಡುತ್ತದೆ. ಇದಾದ ನಂತರ ಲಾಗಿನ್ ಆಗಿ ನೀವು ಈ ಆ್ಯಪನ್ನು ಯಾವಾಗ ಬೇಕಾದರೂ ಬಳಸಬಹುದು.

ವರ್ಷದಿಂದ ವರ್ಷಕ್ಕೆ ಹವಾಮಾನದಲ್ಲಿ ಏರುಪೇರು (ಅತಿವೃಷ್ಟಿ, ಅನಾವೃಷ್ಟಿ) ಸಂಭವಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಹವಾಮಾನ ಮುನ್ಸೂಚನೆ ಆಧರಿಸಿ ನೀಡುವ ಕೃಷಿ ಸಲಹೆ ಅನುಸರಿಸುವುದು ಅಗತ್ಯ. ಭಾರತೀಯ ಹವಾಮಾನ ಇಲಾಖೆ ಹೊರತಂದ ಮೇಘದೂತ್ ತಂತ್ರಾಂಶ ಬಳಸಿ, ಪೋಷಕಾಂಶಗಳ ನಿರ್ವಹಣೆ, ಕೀಟ ಮತ್ತು ರೋಗ ಹತೋಟಿ ಮಾಡುವ ಜತೆಗೆ ಬೆಳೆ ನಷ್ಟ ಕಡಿಮೆ ಮಾಡಿಕೊಂಡು ಆದಾಯ ಹೆಚ್ಚಿಸಿಕೊಳ್ಳಬಹುದು.

-ರಂಜಿತ್.ಟಿ.ಎಚ್, ಗ್ರಾಮೀಣ ಕೃಷಿ ಮೌಸಮ್ ಸೇವಾ ವಿಭಾಗ, ಬ್ರಹ್ಮಾವರ ಕೆವಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net