ಡೆಂಘೆ ಜಾಗೃತಿಗೆ ಮೆಘಾ ಕ್ಯಾಂಪೇನ್​ ನಾಳೆ

16 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಾಲೆ, ಕಾಲೇಜುಗಳಲ್ಲಿ ಡೆಂಘೆ ಜಾಗೃತಿ ಮೂಡಿಸಲು ಜೂ. 18ರಂದು ಜಿಲ್ಲೆಯ 1718 ಶಾಲೆ, ಕಾಲೇಜುಗಳಲ್ಲಿ ಏಕಕಾಲಕ್ಕೆ ಮೆಘಾ ಕ್ಯಾಂಪೇನ್​ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಜಿಲ್ಲಾ ಹಾಗೂ ತಾಲೂಕು ಮಟ್ಟದ ಆರೋಗ್ಯ, ಶಿಕ್ಷಣ, ಪದವಿ ಪೂರ್ವ, ಕಾಲೇಜು ಶಿಕ್ಷಣ ಇಲಾಖೆ, ಪಂಚಾಯತರಾಜ್​ ಅಧಿಕಾರಿಗಳು ಹಾಗೂ ನಗರ ಸಂಸ್ಥೆಗಳ ಅಧಿಕಾರಿಗಳು ಮತ್ತು ನೋಡಲ್​ ಅಧಿಕಾರಿಗಳೊಂದಿಗೆ ಭಾನುವಾರ ಆನ್​ಲೈನ್​ ಸಭೆ ನಡೆಸಿ ಮಾತನಾಡಿದರು.
ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಸೇರಿ 1513 ಶಾಲೆಗಳು ಮತ್ತು 169 ಪದವಿ ಪೂರ್ವ ಕಾಲೇಜುಗಳು, 36 ಪದವಿ ಕಾಲೇಜುಗಳಲ್ಲಿ ಏಕಕಾಲಕ್ಕೆ ಡೆಂಘೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇಷ್ಟು ಬೃಹತ್​ ಪ್ರಮಾಣದ ಕಾರ್ಯಕ್ರಮವನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಧಾರವಾಡ ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿದೆ ಎಂದರು.
ನೋಡಲ್​ ಅಧಿಕಾರಿಗಳಿಗೆ ತರಬೇತಿ, ಅಗತ್ಯ ಮಾಹಿತಿ ನೀಡಲಾಗಿದೆ. ರಜೆ ಹೋಗುವುದು, ವಿಳಂಬ, ಬೇರೆ ಕೆಲಸದ ನೆಪ ಹೇಳಿ ಗೈರಾದರೆ ಸೂಕ್ತ ಕ್ರಮ ಜರುಗಿಸಿ ಇಲಾಖಾ ತನಿಖೆಗೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಸಿದರು.
ನಗರದ ವನಿತಾ ಪ್ರೌಢ ಶಾಲೆಯಲ್ಲಿ ಜೂ. 18ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ತಾಲೂಕು ಮಟ್ಟದಲ್ಲಿ ಆಯಾ ತಾಲೂಕು ವೈದ್ಯಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಂಟಿಯಾಗಿ ಒಂದು ಶಾಲೆಯಲ್ಲಿ ತಾಲೂಕು ಮಟ್ಟದ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಮೂಡಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ಡಿಡಿಪಿಐ ಎಸ್​.ಎಸ್​. ಕೆಳದಿಮಠ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸುರೇಶ ಕೆ.ಪಿ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ಪ್ರಭಾರ ನಿರ್ದೇಶಕ ಪ್ರಕಾಶ ಹೊಸಮನಿ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ರಮೇಶ.ಪಿ., ದೀಪಕ ಮಡಿವಾಳರ,ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net