

ಹುಬ್ಬಳ್ಳಿ: ಇಲ್ಲಿಯ ಭವಾನಿನಗರ ಶ್ರೀರಾವೇಂದ್ರ ಸ್ವಾಮಿಮಠದ ಶ್ರೀ ಸುಜಯೀಂದ್ರ ಸಭಾಭವನದಲ್ಲಿ ಸಮಸ್ತ ಬ್ರಾಹ್ಮಣ ಸಮಾಜ ಹಾಗೂ ರಾಷ್ಟ್ರೊತ್ಥಾನ ರಕ್ತ ಕೇಂದ್ರ ಸಹಯೋಗದಲ್ಲಿ ಮಾರ್ಚ್ 17ರಂದು ಬೆಳಗ್ಗೆ 8ಕ್ಕೆ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದು ರಕ್ತ ಕೇಂದ್ರದ ಟ್ರಸ್ಟಿ ದತ್ತಮೂರ್ತಿ ಕುಲಕರ್ಣಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11ಕ್ಕೆ ನಡೆಯುವ ಶಿಬಿರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಉದ್ಯಮಿ ಎಚ್.ಎನ್. ನಂದಕುಮಾರ, ಕ್ಷಮತಾ ಸೇವಾ ಸಂಸ್ಥೆಯ ಸಂಚಾಲಕ ಗೋವಿಂದ ಜೋಶಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಶಿಬಿರಕ್ಕೆ ಚಾಲನೆ ನೀಡುವರು ಎಂದರು.
ಬ್ರಾಹ್ಮಣ ಸಮಾಜದವರಷ್ಟೇ ಅಲ್ಲದೇ ಎಲ್ಲ ಸಮಾಜದವರು ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಬೇಕು. ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂಬುದು ಅಧ್ಯಯನಗಳಿಂದ ಸಾಭಿತಾಗಿದೆ. ಹಾಗಾಗಿ 18 ವರ್ಷ ಮೇಲ್ಪಟ್ಟ ಯುವಕ- ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಕ್ತದಾನ ಮಾಡಬೇಕು. ಒಬ್ಬರು ರಕ್ತದಾನ ಮಾಡುವುದರಿಂದ ಮೂರು ಜನರ ಜೀವ ಉಳಿಸಬಹುದು. ಇಂತಹ ಪುಣ್ಯದ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದರು.
ಸಮಾಜದ ವತಿಯಿಂದ ನಡೆಯುತ್ತಿರುವ 5ನೇ ಶಿಬಿರ ಇದಾಗಿದೆ. ರಾಷ್ಟ್ರೊತ್ಥಾನ ದಿಶಾ ಲ್ಯಾಬ್ ಕೂಡ ಇದೇ ಸಂದರ್ಭದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದರು.
ಸಮಾಜದ ಹಿರಿಯರಾದ ಎ.ಸಿ. ಗೋಪಾಲ ಮಾತನಾಡಿ, ಈ ವರ್ಷ ಸುಮಾರು 500 ಯುನಿಟ್ ರಕ್ತ ಸಂಗ್ರಹಿಸುವ ಗುರಿ ಇದೆ. ಅಂದರೆ 500ಕ್ಕೂ ಹೆಚ್ಚು ಜನ ದಾನ ಮಾಡುವರು. ಕಳೆದ ಬಾರಿ 350 ಯುನಿಟ್ ರಕ್ತ ಸಂಗ್ರಹ ಮಾಡಲಾಗಿತ್ತು. ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಬದಲಾಗಿ ಇನ್ನಷ್ಟು ಆರೋಗ್ಯ ಸುಧಾರಣೆಯಾಗುತ್ತದೆ ಎಂದು ತಿಳಿಸಿದರು.
ಪ್ರಮುಖರಾದ ಲಕ್ಷ್ಮಣ ಕುಲಕರ್ಣಿ, ಸುನೀಲ ಗುಮಾಸ್ತೆ, ಶಂಕರ ಪಾಟೀಲ, ಕಿರಣ ಗಡ, ಮನೋಹರ ಪರ್ವತಿ ಉಪಸ್ಥಿತರಿದ್ದರು.