ವಾರ್ಡ್‌ವಾರು ಕ್ಷೇತ್ರ ವಿಂಗಡನೆ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

Meeting with Urban Development Officers Mandya
Published on

ಮಂಡ್ಯ: ನಗರ ಸ್ಥಳೀಯ ಸಂಸ್ಥೆಗಳ ಆಡಳಿತ ಮಂಡಳಿ ಅವಧಿ ಶೀಘ್ರದಲ್ಲಿಯೇ ಮುಕ್ತಾಯಗೊಳ್ಳುವುದರಿಂದ 2011ರ ಜನಗಣತಿ ಅನ್ವಯ ವಾರ್ಡ್‌ವಾರು ಕ್ಷೇತ್ರ ಪುನರ್ ವಿಂಗಡನೆ ಮಾಡುವ ಕಾರ್ಯ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಗರಾಭಿವೃದ್ಧಿ ಅಧಿಕಾರಿಗಳೊಂದಿಗೆ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2011ರ ಜನಗಣತಿ ಪ್ರಕಾರ ಹಾಗೂ ಈ ಹಿಂದೆ ನಿಗದಿಪಡಿಸಿರುವ ಗಡಿರೇಖೆಗೆ ಅನುಗುಣವಾಗಿ ಅಧಿಸೂಚನೆಯನ್ನು ತಾಳೆ ಮಾಡಿಕೊಂಡು ಗಡಿ ರೇಖೆ ಗುರುತಿಸಲು ಸಂಬಂದಪಟ್ಟ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಡ್ಯ ನಗರಸಭೆಯ ಆಡಳಿತಾವಧಿ ನ.2, ಮದ್ದೂರು, ಪಾಂಡವಪುರ ಮತ್ತು ಮಳವಳ್ಳಿ ಪುರಸಭೆ ಅವಧಿ ಅ.23, ಕೆ.ಆರ್.ಪೇಟೆ ಅ.31, ಶ್ರೀರಂಗಪಟ್ಟಣ ನ.5 ಹಾಗೂ ಬೆಳ್ಳೂರು ಪಟ್ಟಣ ಪಂಚಾಯಿತಿ ನ.4ಕ್ಕೆ ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸುವ ಪೂರ್ವ ಅಧಿಕಾರಿಗಳು ಗಡಿರೇಖೆಯ ಗುರುತಿಸಬೇಕು. ಸಾರ್ವಜನಿಕರಿಂದ ಏನಾದರೂ ಆಕ್ಷೇಪಗಳಿದ್ದರೆ ಆಲಿಸಿ ನಂತರ ಅಂತಿಮ ತೀರ್ಮಾನ ಕೈಗೊಳ್ಳಬೇಕು. ವಾರ್ಡ್‌ವಾರು ಗಡಿ ರೇಖೆಯನ್ನು ಸೂಚಿಸಿರುವ ಕರಡು ಅಧಿಸೂಚನೆಯನ್ನು ನಗರ ಸ್ಥಳೀಯ ಸಂಸ್ಥೆಗಳು ಪ್ರಕಟ ಮಾಡಲಾಗಿದ್ದು, ಈ ಸಂಬಂಧ ಯಾವುದೇ ಆಕ್ಷೇಪಣೆಗಳಿದ್ದಲ್ಲಿ 15 ದಿನಗಳೊಳಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬಹುದಾಗಿದೆ. ಮದ್ದೂರು ಪುರಸಭೆ ಈಗಾಗಲೇ ನಗರಸಭೆಯಾಗಿ ಉನ್ನತೀಕರಣಗೊಂಡಿದ್ದು, 4 ಗ್ರಾಮ ಪಂಚಾಯಿತಿ ಸೇರ್ಪಡೆಗೊಂಡಿದೆ. ಆದ್ದರಿಂದ ಗ್ರಾಮಗಳನ್ನು ನಗರಸಭಾ ಪರಿಧಿಯ ಒಳಗಡೆ ತೆಗೆದುಕೊಳ್ಳಲು ಗಡಿ ರೇಖೆಯನ್ನು ಗುರುತಿಸಬೇಕೆಂದು ಸೂಚನೆ ನೀಡಿದರು.

ಸಭೆಯಲ್ಲಿ ನಗರಾಭಿವೃದ್ಧಿ ಕೋಶಾಧಿಕಾರಿ ಟಿ.ಎನ್.ನರಸಿಂಹಮೂರ್ತಿ, ಪೌರಾಯುಕ್ತೆ ಪಂಪಶ್ರೀ, ಕಾರ್ಯನಿರ್ವಾಹಕ ಇಂಜಿನಿಯರ್ ಪ್ರತಾಪ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರವಿಕುಮಾರ್, ನೋಡಲ್ ಅಧಿಕಾರಿ ಸೌಮ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net