ಕಬ್ಬಿನ ಹಣ ಪಾವತಿ ವಿಳಂಬವಾಗದಿರಲಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಎಚ್ಚರಿಕೆ

Meeting with sugar mill officials and farmers Mandya
Published on

ಮಂಡ್ಯ: ರೈತರು ಪೂರೈಕೆ ಮಾಡುವ ಕಬ್ಬಿನ ಮೇಲೆ ಸಕ್ಕರೆ ಕಾರ್ಖಾನೆ ನಡೆಯುತ್ತಿದೆ. ಆದ್ದರಿಂದ ಅವರ ಕಷ್ಟಕ್ಕೆ ಸ್ಪಂದಿಸಿ ಕಬ್ಬು ಸರಬರಾಜು ಮಾಡಿದ 14 ದಿನದೊಳಗಾಗಿ ಹಣ ಪಾವತಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಸಕ್ಕರೆ ಕಾರ್ಖಾನೆ ಅಧಿಕಾರಿಗಳು ಹಾಗೂ ರೈತರೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ರೈತರಿಗೆ 29 ಕೋಟಿ ರೂ ಪಾವತಿಸುವುದು ಬಾಕಿ ಇದೆ. ಇದನ್ನು ಪ್ರತಿವಾರ 4 ರಿಂದ 5 ಕೋಟಿ ರೂ ಪಾವತಿಸಿ. ಮಾ.5ರ ನಂತರ ಬಾಕಿ ಇದ್ದರೆ ಬಡ್ಡಿ ಸಮೇತ ವಸೂಲಿ ಮಾಡಿ ರೈತರಿಗೆ ನೀಡಲಾಗುವುದು ಎಂದರು.

ಕೊಪ್ಪ ಸಕ್ಕರೆ ಕಾರ್ಖಾನೆ ಅವರು ಬಾಕಿ ಇರುವ 7 ಕೋಟಿ ರೂಗಳನ್ನು ಫೆಬ್ರವರಿ ಅಂತ್ಯದೊಳಗೆ ಪಾವತಿಸುವಂತೆ ಸೂಚನೆ ನೀಡಿದರು. ಕಬ್ಬು ಕಟಾವಿಗೆ ಸಂಬಂಧಿಸಿದಂತೆ ಒಂದೊಂದು ರೀತಿ ದರವನ್ನು ರೈತರಿಂದ ವಸೂಲಿ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಸಭೆ ನಡೆಸಿ ಏಕರೂಪ ದರ ನಿಗದಿಪಡಿಸಲಾಗುವುದು. ರೈತರ ಜೀವನಾಡಿ ಸಕ್ಕರೆ ಕಾರ್ಖಾನೆಯನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಿದ್ದು, ರೈತರು ಮೈ ಷುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಲಾಗುವುದೇ ಎಂದು ನನ್ನನ್ನು ಪ್ರಶ್ನಿಸಿದರೆ ನೋವಾಗುತ್ತದೆ ಎಂದು ಹೇಳಿದರು.

ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಸರ್ಕಾರಿ ಸ್ವಾಮ್ಯದಲ್ಲಿರುವ ಕಂಪನಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ ನಡೆಸಲಾಗುತ್ತದೆ. ಪ್ರತಿವರ್ಷ ಲಾಭ ನಷ್ಟ ಕುರಿತು ಆಡಿಟ್ ಮಾಡಲಾಗುವುದು. ಮುಖ್ಯಮಂತ್ರಿ ಹಾಗೂ ಶಾಸಕರು ಮುಂದಾಳತ್ವ ತೆಗೆದುಕೊಂಡು ಮೈಷುಗರ್ ಕಾರ್ಖಾನೆಯನ್ನು ಪುನಶ್ಚೇತನ ಮಾಡಲಾಗಿದೆ. ಆದ್ದರಿಂದ ಖಾಸಗೀಕರಣ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ ಮಾತನಾಡಿ, ಜೂನ್ ಎರಡನೇ ವಾರದಲ್ಲಿ ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಅವರು ರೈತರ ಕಬ್ಬು ನುರಿಸಿ 14 ದಿನ ಮೇಲ್ಪಟ್ಟರೂ 4000 ರೈತರ 29 ಕೋಟಿ ರೂ ಪಾವತಿಸಬೇಕಿದೆ. ಮಾ.15 ರೊಳಗೆ ಪಾವತಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಹಾಜರಿದ್ದ ರೈತ ಮುಖಂಡರು ಕಾರ್ಖಾನೆಯವರು 14 ದಿನದೊಳಗೆ ಹಣ ಪಾವತಿಸಿಲ್ಲ ಎಂದರೆ ಬಡ್ಡಿ ಸೇರಿಸಿ ಕೊಡಬೇಕು. ರೈತರ ಆರ್ಥಿಕ ಪರಿಸ್ಥಿತಿ ಗಂಭೀರವಾಗಿರುವುದು ಕಷ್ಟದ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಕಬ್ಬು ಕಟಾವಿಗೆ ದರ ನಿಗದಿಯಾಗಬೇಕು. ಮೈಷುಗರ್ ಲಾಭ ನಷ್ಟ ಕುರಿತು ವರದಿ ನೀಡಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಜಿಪಂ ಸಿಇಒ ಕೆ.ಆರ್.ನಂದಿನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net