

ಮಂಡ್ಯ: ಜಿಲ್ಲೆಯ ಖಾಸಗಿ ಸಕ್ಕರೆ ಕಾರ್ಖಾನೆಗಳು 14 ದಿನದೊಳಗಾಗಿ ರೈತರಿಂದ ಖರೀದಿ ಮಾಡುವ ಕಬ್ಬಿನ ಹಣ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಕ್ಕರೆ ಕಾರ್ಖಾನೆಯ ಮಾಲೀಕರು ಹಾಗೂ ರೈತರೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈಷುಗರ್ ಕಾರ್ಖಾನೆ ಸರ್ಕಾರಿ ಸಂಸ್ಥೆಯಾಗಿದ್ದು, ರೈತರಿಂದ ಖರೀದಿ ಮಾಡಿರುವ ಕಬ್ಬಿಗೆ ಹಣ ಪಾವತಿಸಲಾಗಿದೆ. ಖಾಸಗಿ ಸಕ್ಕರೆ ಕಾರ್ಖಾನೆಗಳಿಗೂ ಸಹ ಪಾವತಿಸಲು ಯಾವುದೇ ತೊಂದರೆ ಇಲ್ಲ ಎಂದರು.
ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ, ಕೊಪ್ಪ ಎನ್‌ಎಸ್‌ಎಲ್ ಹಾಗೂ ಕೆ.ಆರ್.ಪೇಟೆ ಕೋರಮಂಡಲ್ ಸಕ್ಕರೆ ಕಾರ್ಖಾನೆಯಲ್ಲಿ ಪಾವತಿಗೆ ಬಾಕಿ ಇರುವ ರೈತರ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿ, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯವರು ಮಾ.10ರೊಳಗೆ ಹಾಗೂ ಕೋರಮಂಡಲ್ ಮತ್ತು ಎನ್‌ಎಸ್‌ಎಲ್ ಕಾರ್ಖಾನೆ ಅವರು ಫೆ.28ರೊಳಗಾಗಿ ಹಣ ಪಾವತಿಸುವಂತೆ ತಿಳಿಸಿದರು.
ರೈತರು ಹಾಗೂ ಸಕ್ಕರೆ ಕಾರ್ಖಾನೆಯ ನಡುವೆ ಬಾಂಧವ್ಯ ಉತ್ತಮವಾಗಿರಬೇಕು. ರೈತರ ಕುಟುಂಬದಲ್ಲಿ ಮದುವೆ, ಆರೋಗ್ಯದಲ್ಲಿ ತೊಂದರೆ ಮುಂತಾದ ಕಷ್ಟವಿರುವ ಸಂದರ್ಭದಲ್ಲಿ ಆಧ್ಯತೆಯ ಮೇಲೆ ಹಣ ಪಾವತಿಸಬೇಕು. ಉತ್ತರ ಕರ್ನಾಟಕಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಕಬ್ಬಿನ ಇಳುವರಿ ಕಡಿಮೆ. ಅದನ್ನು ಅಧ್ಯಯನ ಮಾಡಲು ತಜ್ಞರ ಸಮಿತಿ ರಚಿಸಲಾಗಿತ್ತು. ಅವರು ನೀಡಿರುವ ವರದಿಯನ್ನು ಸಕ್ಕರೆ ಆಯುಕ್ತರಿಗೆ ಕಳುಹಿಸಿಕೊಡಿ. ಸಕ್ಕರೆ ಕಾರ್ಖಾನೆ ಅವರು ಸಹ ರೈತರಿಗೆ ಉಪಯೋಗಿಸಬೇಕಿರುವ ತಳಿ, ಗೊಬ್ಬರ, ಬೆಳೆಯಲ್ಲಿ ನೀಡಬೇಕಿರುವ ಅಂತರ ಸೇರಿದಂತೆ ಕೃಷಿ ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸಿ ಎಂದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಕೃಷ್ಣ ಕುಮಾರ್, ವ್ಯವಸ್ಥಾಪಕಿ ರೇಣುಕಾ, ಕೃಷಿ ಇಲಾಖೆಯ ಅಧಿಕಾರಿ ಹರ್ಷ ಸೇರಿದಂತೆ ವಿವಿಧ ಸಕ್ಕರೆಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.