ಕಬ್ಬು ಅರೆಯಲು ಅನುಮತಿಗೆ ಮನವಿ: ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ಮಾಹಿತಿ

Meeting with sugar factory officials Mandya
Published on

ಮಂಡ್ಯ: ಜೂನ್ ಅಂತ್ಯದೊಳಗೆ ಕಾರ್ಖಾನೆಯಲ್ಲಿ ಕಬ್ಬು ನುರಿಸಲು ಪ್ರಾರಂಭಕ್ಕೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಸಕ್ಕರೆ ಕಾರ್ಖಾನೆ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ನೀಡಿದ ಮಾಹಿತಿಯನ್ನು ಕ್ರೋಢೀಕರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಡಾ.ಕುಮಾರ ಮಾತನಾಡಿ, ಸಕ್ಕರೆ ಕಾರ್ಖಾನೆಗಳು ಕಬ್ಬು ಸರಬರಾಜು ಮಾಡುವ ರೈತರಿಗೆ 15 ದಿನದೊಳಗೆ ಹಣ ಪಾವತಿಸಬೇಕು. ಕಳೆದ ಸಾಲಿನಲ್ಲಿ ರೈತರಿಗೆ ನಿಗದಿತ ಅವಧಿಯಲ್ಲಿ ಹಣ ಪಾವತಿ ಮಾಡಿರುವುದಿಲ್ಲವೆಂದು ಹಲವು ದೂರು ಬಂದಿದ್ದವು. ಈ ಬಾರಿ ದೂರಿಗೆ ಆಸ್ಪದ ನೀಡದಂತೆ ಹಣ ಪಾವತಿಸಿ. ಜಿಲ್ಲೆಯಲ್ಲಿ 5 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಕೆಲಸಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಅದರ ವರದಿಯನ್ನು ಬೆಂಗಳೂರಿನ ಕೇಂದ್ರ ಕಚೇರಿಗೆ ಕಳುಹಿಸಬೇಕಿರುತ್ತದೆ. ಸಕ್ಕರೆ ಆಯುಕ್ತರು ನೀಡುವ ದಿನಾಂಕದಂದು ಎಲ್ಲ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಕೆಲಸಕ್ಕೆ ಚಾಲನೆ ನೀಡುವುದು. ಇದಲ್ಲದೇ ಕಬ್ಬು ನುರಿಸುವ ಕೆಲಸಕ್ಕೆ ನವೀಕರಣ ಪತ್ರವನ್ನು ಕಾರ್ಖಾನೆಗಳು ಪಡೆದುಕೊಳ್ಳುವುದು ಎಂದರು.

ಸಕ್ಕರೆ ಕಾರ್ಖಾನೆ ಅವರು ತಮ್ಮ ವ್ಯಾಪ್ತಿಗೆ ನಿಗದಿಪಡಿಸಿರುವ ಕಬ್ಬನ್ನು ಮಾತ್ರ ಕಟಾವು ಮಾಡಲು ಅವಕಾಶವಿರುತ್ತದೆ. ಇದನ್ನು ಮನದಟ್ಟು ಮಾಡಿಕೊಂಡು ಕಾರ್ಖಾನೆಗಳಲ್ಲಿ ಸಣ್ಣ ಪುಟ್ಟ ಆಂತರಿಕ ತೊಂದರೆಗಳಿದ್ದಲ್ಲಿ ಈಗಲೇ ಸರಿಪಡಿಸಿಕೊಳ್ಳಿ. ಕಬ್ಬು ಕಟಾವು ಮಾಡಲು ಸುಮಾರು 15,000 ಕಾರ್ಮಿಕರು ಹೊರ ಜಿಲ್ಲೆ ಅಥವಾ ರಾಜ್ಯದಿಂದ ಜಿಲ್ಲೆಗೆ ಬರುತ್ತಾರೆ. ಸಕ್ಕರೆ ಕಾರ್ಖಾನೆಯವರು ತಮ್ಮ ವ್ಯಾಪ್ತಿಯ ಕಾರ್ಮಿಕರಿಗೆ ಮೂಲ ವ್ಯವಸ್ಥೆಗಳಾದ ಕುಡಿಯುವ ನೀರು, ಶೌಚಗೃಹದ ವ್ಯವಸ್ಥೆ ಮಾಡಬೇಕು. ಮಳೆಗಾಲದ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಅವುಗಳ ಬಗ್ಗೆ ಕಾರ್ಮಿಕರಲ್ಲಿ ಅರಿವು ಮೂಡಿಸಬೇಕು. ಅವರಿಗೆ ಒಪ್ಪಂದ ಮಾಡಿಕೊಂಡಿರುವ ರೀತಿ ಸರಿಯಾದ ಸಮಯಕ್ಕೆ ಹಣ ಪಾವತಿ ಮಾಡಬೇಕು ಎಂದು ಸೂಚನೆ ನೀಡಿದರು.

ಕೋರಮಂಡಲ್ ಸಕ್ಕರೆ ಕಾರ್ಖಾನೆ ದಿನಕ್ಕೆ 4000 ಮೆಟ್ರಿಕ್ ಟನ್ ಕಬ್ಬು ನುರಿಸುವ ಸಾಮರ್ಥ್ಯವಿದ್ದು, ಒಟ್ಟು 5.5 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದಾರೆ. ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ದಿನಕ್ಕೆ 5000 ಮೆಟ್ರಿಕ್ ಟನ್ ಕಬ್ಬು ನುರಿಸುವ ಸಾಮರ್ಥ್ಯವಿದ್ದು, ಒಟ್ಟು 7 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಇದೆ. ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ 5000 ಮೆಟ್ರಿಕ್ ಟನ್ ಕಬ್ಬು ನುರಿಸುವ ಸಾಮರ್ಥ್ಯವಿದ್ದು, ಒಟ್ಟು 8 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದಾರೆ. ಎಂ.ಆರ್.ಎನ್ ಸಕ್ಕರೆ ಕಾರ್ಖಾನೆ ದಿನಕ್ಕೆ 3500 ಮೆಟ್ರಿಕ್ ಟನ್ ಕಬ್ಬು ನುರಿಸುವ ಸಾಮರ್ಥ್ಯವಿದ್ದು, ಒಟ್ಟು 4 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯುವ ಗುರಿ ಹೊಂದಿದ್ದಾರೆ. ಮೈಶುಗರ್ ಕಾರ್ಖಾನೆಯು 4,20,000 ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ಪ್ರತಿ ದಿನ 4000 ಮೆಟ್ರಿಕ್ ಟನ್ ಕಬ್ಬು ನುರಿಸುವ ಸಾಮರ್ಥ್ಯವಿದೆ ಎಂದು ಕಾರ್ಖಾನೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಕೃಷ್ಣಕುಮಾರ್, ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ಕೃಷಿ ಇಲಾಖೆ ಅಧಿಕಾರಿ ಹರ್ಷ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net