ಟ್ರಸ್ಟ್‌ಗಳ ಚಟುವಟಿಕೆಗೆ ಸರ್ಕಾರದ ನೆರವು: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ‌

Meeting with Putina and KSNA Trust Mandya
Published on

ಮಂಡ್ಯ: ಖ್ಯಾತ ಸಾಹಿತಿಗಳಾದ ಪು.ತಿ.ನರಸಿಂಹಚಾರ್ ಹಾಗೂ ಕೆ.ಎಸ್.ನರಸಿಂಹಸ್ವಾಮಿ ಅವರ ಟ್ರಸ್ಟ್‌ ಚಟುವಟಿಕೆಗಳಿಗೆ ಸರ್ಕಾರ ಎಲ್ಲ ರೀತಿಯ ಅಗತ್ಯ ನೆರವು ನೀಡಲಿದ್ದು, ಆದಷ್ಟು ಶೀಘ್ರ ಅನುಷ್ಠಾನಕ್ಕೆ ಬರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಬೆಂಗಳೂರಿನ‌ ವಿಕಾಸಸೌಧ ಸಭಾಂಗಣದಲ್ಲಿ ಪು.ತಿ.ನ ಹಾಗೂ ಕೆ.ಎಸ್.ನ ಟ್ರಸ್ಟ್‌ ಅಧ್ಯಕ್ಷರು ಹಾಗೂ ಸದಸ್ಯರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಜನಿಸಿದ ಇಬ್ಬರೂ ಸಾಹಿತಿಗಳು ಇಡೀ ನಾಡಿನ ಹೆಮ್ಮೆಯಾಗಿದ್ದಾರೆ. ಅವರ ಸಾಹಿತ್ಯ ಕೃತಿಗಳು ಅತ್ಯಂತ ಶ್ರೇಷ್ಠ ಹಾಗೂ ಜನಪ್ರಿಯವಾಗಿವೆ. ಅವರಿಬ್ಬರ ಸ್ಮರಣಾರ್ಥ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಾರಂಭಿಸಿರುವ ಟ್ರಸ್ಟ್ ಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಎಲ್ಲ ರೀತಿಯ ಸಹಕಾರ, ಪ್ರೋತ್ಸಾಹ ನೀಡಲಾಗುವುದಾಗಿ ಹೇಳಿದರು.

ಮೇಲುಕೋಟೆಯಲ್ಲಿರುವ ಪು.ತಿ.ನರವರ ಮನೆಯನ್ನು ಈಗಾಗಲೇ ನವೀಕರಣಗೊಳಿಸಲಾಗಿದೆ. ಸಮಾಧಿ ಸ್ಥಳ ಅಭಿವೃದ್ಧಿ ಮಾಡಲು ಬಹಳ ದಿನಗಳಿಂದ ಬೇಡಿಕೆಯಿದೆ. ಬಯಲು ರಂಗಮಂದಿರಕ್ಕೆ ಮೇಲ್ಛಾವಣಿ ಹಾಕಿಸುವ ಕಾರ್ಯ ಮತ್ತು ಅವರ ಸಾಹಿತ್ಯಗಳ ಮರುಮುದ್ರಣ ಹಾಗೂ ಜನಪ್ರಿಯಗೊಳಿಸುವ ಪ್ರಯತ್ನಗಳಿಗೆ ಅಗತ್ಯ ನೆರವನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲೇ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಈಗಾಗಲೇ ಆರ್ಥಿಕ ವರ್ಷ ಕೊನೆಯಲ್ಲಿರುವುದರಿಂದ ಉಳಿಕೆ ಅನುದಾನ ಪಡೆದು ಒಂದು ವೇಳೆ ಸಾದ್ಯವಾಗದಿದ್ದರೆ ಹೊಸ ಬಜೆಟ್ ನಲ್ಲಿ ಹಣಕಾಸು ನೆರವು ಪಡೆದು ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ ಸಚಿವ ಸಿಆರ್‌ಎಸ್,‌ ಅದೇ ರೀತಿ ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿ ಗ್ರಾಮದಲ್ಲಿರುವ ಕೆ.ಎಸ್. ನರಸಿಂಹಸ್ವಾಮಿ ಅವರ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸುವುದು. ಕೆ.ಎಸ್.ನ ಅವರಿಗೆ ಸ್ಪೂರ್ತಿ ನೀಡಿದ ಕೆರೆಯನ್ನು ಸಣ್ಣ ನೀರಾವರಿ ಮತ್ತು ಪ್ರವಾಸೋದ್ಯಮ ಇಲಾಖೆಗಳ ನೆರವಿನೊಂದಿಗೆ ವಿಹಾರ ಧಾಮವನ್ನಾಗಿ ಅಭಿವೃದ್ಧಿಪಡಿಸುವ ಕಾರ್ಯವನ್ನು ಸಹ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಇಬ್ಬರೂ ಸಾಹಿತಿಗಳು, ಕುವೆಂಪು, ಬೇಂದ್ರೆಯಷ್ಟೇ ಮಹೋನ್ನತರಾಗಿದ್ದು, ಮಂಡ್ಯ ಜಿಲ್ಲೆಗೆ ಅಪಾರ ಕೀರ್ತಿ ತಂದಿದ್ದಾರೆ. ಅವರ ಹಿರಿಮೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ, ಕಾಪಾಡಿಕೊಳ್ಳುವ ಜವಾಬ್ದಾರಿ ಸರ್ಕಾರ, ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರ ಮೇಲಿದೆ. ಎಲ್ಲರೂ ಒಗ್ಗೂಡಿ ಕೆ.ಎಸ್.ನ ಹಾಗೂ ಪು.ತಿ.ನ ಅವರ ಜೀವನ, ಸಾಧನೆ, ಆದರ್ಶಗಳನ್ನು ಜಗಕ್ಕೆ ಪಸರಿಸೋಣ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ನಮ್ಮ ಮನವಿಗೆ ಸ್ಪಂದಿಸಿದ್ದು, ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಎರಡೂ ಟ್ರಸ್ಟ್ ಗಳಿಗೆ ಹೊಸ ಸ್ವರೂಪ ನೀಡಲಾಗುವುದೆಂದು ತಿಳಿಸಿದರು.

ಪು.ತಿ.ನ ಟ್ರಸ್ಟ್‌ ಅಧ್ಯಕ್ಷ ಪ್ರೊ.ಕೃಷ್ಣೇಗೌಡ, ಕೆ.ಎಸ್.ನ ಟ್ರಸ್ಟ್‌ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಅವರು ಟ್ರಸ್ಟ್‌ ಆಶಯಗಳು, ಬೇಡಿಕೆಗಳನ್ನು ಸಚಿವರ ಗಮನಕ್ಕೆ ತಂದರು. ಎರಡೂ ಟ್ರಸ್ಟ್ ಸದಸ್ಯರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಧರಣಿದೇವಿ ಮಾಲಗತ್ತಿ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net