ಭಾಷೆ ಕೊರತೆಯ ನೆಪ ಬೇಡ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

Meeting with parents of Kendriya Vidyalaya children Mandya
Published on

ಮಂಡ್ಯ: ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕರ ಕೊರತೆ ಇದ್ದು, ಭರ್ತಿ ಮಾಡುವ ಪ್ರಕ್ರಿಯೆ ನಡೆಸಲಾಗುತ್ತಿದೆ. ಈಗಿರುವ ಶಿಕ್ಷಕರ ಸಹಕಾರದೊಂದಿಗೆ ವ್ಯವಸ್ಥಿತವಾಗಿ ತರಗತಿಗಳನ್ನು ನಡೆಸುವಂತೆ ಪ್ರಾಂಶುಪಾಲರಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೇಂದ್ರೀಯ ವಿದ್ಯಾಲಯದ ಮಕ್ಕಳ ಪಾಲಕರ ಸಭೆ ಹಾಗೂ ಕೇಂದ್ರ ವಿದ್ಯಾಲಯದ ಕಟ್ಟಡ ಕಾಮಗಾರಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾಲಯದಲ್ಲಿ ವಿಷಯವಾರು ಶಿಕ್ಷಕರ ಕೊರತೆ ಇದೆ. ಇರುವ ಶಿಕ್ಷಕರು ಕೆಲಸಗಳನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಸಂವಹನದಲ್ಲಿ ಭಾಷೆಯ ತೊಂದರೆ ಉಂಟಾಗುತ್ತಿದೆ ಎಂದು ಪಾಲಕರು ದೂರು ಸಲ್ಲಿಸಿದ್ದು, ಪ್ರಾಂಶುಪಾಲರು ಈ ಬಗ್ಗೆ ಕ್ರಮ ವಹಿಸಬೇಕು ಎಂದರು.

ಮಕ್ಕಳಲ್ಲಿ ಯಾವುದೇ ಬೇಧಬಾವ ಮಾಡಬಾರದು. ಭಾಷೆ ಕೊರತೆಯ ನೆಪ ಹೇಳದೆ ಮಕ್ಕಳಿಗೆ ಸರಿಯಾಗಿ ತರಗತಿ ಮಾಡಬೇಕು. ವಿದ್ಯಾಲಯದಲ್ಲಿ ಎಲ್ಲ ರೀತಿಯ ಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಬೇಕು. ಅದರಂತೆ ಪಾಲಕರ ಸಭೆ ನಡೆಸಿ ಮಕ್ಕಳ ಬಗ್ಗೆ ವರದಿ ಸಲ್ಲಿಸಬೇಕು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಆಯಾ ವಿಷಯಗಳಿಗೆ ಸಂಬಂಧಿಸಿದ ಶಿಕ್ಷಕರನ್ನು ಸಧ್ಯದಲ್ಲಿ ನೇಮಕ ಮಾಡಲಾಗುವುದು. ಕಟ್ಟಡ ಕಾಮಗಾರಿ ಕೆಲಸ ಅಂತಿಮ ಹಂತದಲ್ಲಿದ್ದು, ಇದರ ಬಗ್ಗೆ ಪಾಲಕರಿಗೆ ಯಾವುದೇ ಆತಂಕ ಬೇಡ. ಈಗಾಗಲೇ ಶಿಕ್ಷಕರ ಸಂದರ್ಶನ ನಡೆಯುತ್ತಿದ್ದು, ಆದಷ್ಟು ಬೇಗ ಶಿಕ್ಷಕರ ನೇಮಕಾತಿ ನಡೆಸಲಾಗುವುದು. ಮಕ್ಕಳಿಗೆ ಆರ್ಥವಾಗುವ ರೀತಿ ಪಾಠ ಮಾಡಬೇಕು. ಗಣಿತ ಹಾಗೂ ಹಿಂದಿ ವಿಷಯಗಳಲ್ಲಿ ಸ್ವಲ್ಪ ನಿಗಾವಹಿಸಿ ತರಗತಿ ಮಾಡಿ. ಆದ್ದರಿಂದ ತರಗತಿಗಳನ್ನು ಸರಿಯಾಗಿ ನಡೆಸಿ. ಮತ್ತೊಮ್ಮೆ ಪಾಲಕರಿಂದ ಯಾವುದೇ ದೂರುಗಳು ಬರಬಾರದು ಎಂದು ತಿಳಿಸಿದರು.

ಸಭೆಯಲ್ಲಿ ಕೇಂದ್ರಿಯ ವಿದ್ಯಾಲಯದ ಪ್ರಾಂಶುಪಾಲ ಭರತ್ ಲಾಲ್ ಮೀನಾ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಕೀಲಾರ ಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net