

ವಿಜಯವಾಣಿ ಸುದ್ದಿಜಾಲ ಉಡುಪಿ
ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿರುವ ರೆಡಿಮಿಕ್ಸ್ ಕಾಂಕ್ರೀಟ್ ಘಟಕಗಳ ವಿರುದ್ಧ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ಸಾರ್ವಜನಿಕರಿಂದ ದೂರು ಕೇಳಿ ಬರುತ್ತಿವೆ. ನಗರಸಭೆಯ ನಿಯಮಾವಳಿಗಳಿಗೆ ಬದ್ಧವಾಗಿ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದು ಘಟಕಗಳ ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ ನೀಡಿದರು.
ಉಡುಪಿ ನಗರಸಭೆ ಕಚೇರಿಯಲ್ಲಿ ಮಣಿಪಾಲದ ರೆಡಿಮಿಕ್ಸ್ ಘಟಕಗಳ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿ, ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಲೋಡ್ ಕಾಂಕ್ರೀಟ್ ಹಾಕಿಕೊಂಡು ವಾಹನ ಸಂಚರಿಸುತ್ತಿರುವುದರಿಂದ ರಸ್ತೆಗಳೂ ಹದಗೆಟ್ಟಿವೆ. ಕೂಡಲೇ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಘಟಕಗಳಲ್ಲಿ ಸಿಮೆಂಟ್ ಧೂಳು, ತ್ಯಾಜ್ಯ ನೀರನ್ನು ಸಮರ್ಪಕ ವಿಲೇವಾರಿ ಮಾಡುತ್ತಿಲ್ಲ. ಅದರಿಂದ ಸುತ್ತಮುತ್ತಲಿನ ಪರಿಸರ ಮಾಲಿನ್ಯಗೊಂಡಿದೆ. ನಿಯಮ ಮೀರಿ ವಾಹನದಲ್ಲಿ ಹೆಚ್ಚಿನ ಕಾಂಕ್ರೀಟ್ ಸಾಗಿಸುತ್ತಿರುವುದರಿಂದ ಅದು ರಸ್ತೆಯಲ್ಲಿ ಚೆಲ್ಲುತ್ತಿವೆ. ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಹಲವು ಅಪಘಾತಗಳು ಸಂಭವಿಸಿವೆ. ಕಾನೂನು ಚೌಕಟ್ಟಿನಲ್ಲಿ ಕಾರ್ಯಾಚರಣೆ ನಡೆಸಿ ಎಂದು ಸೂಚಿಸಿದರು.
ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಸದಸ್ಯೆ ಕಲ್ಪನಾ ಸುಧಾಮ, ಉಡುಪಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಹರೀಶ್ ಕುಂದರ್, ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತ ದುರ್ಗಾಪ್ರಸಾದ್ ಹಾಗೂ ವಿವಿಧ ರೆಡಿಮಿಕ್ಸ್ ಘಟಕಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪರ್ಕಳದ ರಸ್ತೆಯಲ್ಲಿ ರೆಡಿಮಿಕ್ಸ್ ವಾಹನದಿಂದ ಕಾಂಕ್ರೀಟ್ ಮಿಶ್ರಿತ ಜೆಲ್ಲಿಕಲ್ಲು ಬೀಳುತ್ತಿದ್ದು, ವಾಹನ ಸಂಚಾರಕ್ಕೆ ತೊಡಕಾಗುತ್ತಿರುವ ಕುರಿತು ಫೆ.17ರಂದು ವಾಹನ ಸವಾರರಿಗೆ ಪ್ರಾಣಭೀತಿ ಎಂಬ ಶೀರ್ಷಿಕೆಯಡಿ ವಿಜಯವಾಣಿ ವರದಿ ಪ್ರಕಟಿಸಿತ್ತು. ನಿತ್ಯವೂ ಅಪಘಾತ ಆಗುತ್ತಿರುವ ಕುರಿತು ಅಯ್ಯೋ ಪ್ರಾಬ್ಲಂ ಕಣ್ರೀ ಮೂಲಕ ಗಮನ ಸೆಳೆದಿತ್ತು.