ಮೈಕ್ರೋ ಫೈನಾನ್ಸ್ ಕಿರುಕುಳ ಸಹಾಯವಾಣಿ ಪ್ರಾರಂಭ: ಕಿರುಕುಳ ಮರುಕಳಿಸಿದರೆ ಸ್ವಯಂ ಹಿತಾಸಕ್ತಿಯಿಂದ ಎಫ್‌ಐಆರ್ ದಾಖಲು

Meeting with officials of micro finance companies Mandya
Published on

ಮಂಡ್ಯ: ಮೈಕ್ರೋ ಫೈನಾನ್ಸ್ ಸಿಬ್ಬಂದಿ ಸಾಲ ವಸೂಲಾತಿ ಸಂದರ್ಭದಲ್ಲಿ ಕಿರುಕುಳ ನೀಡಿದರೆ 08232- 224655 ಸಹಾಯವಾಣಿಗೆ ಕರೆ ಮಾಡಿ ದೂರು ಸಲ್ಲಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ವ್ಯಕ್ತಿಯನ್ನು ನಿಂದನೆ ಮಾಡಲು ಸಮಾಜದಲ್ಲಿ ಅವಕಾಶವಿಲ್ಲ. ಸಾಲ ಮರುಪಾವತಿ ಮಾಡದೆ ಇರುವವರನ್ನು ಅವಾಚ್ಯ ಪದಗಳಿಂದ ನಿಂದಿಸುವುದು. ಮನೆಯ ಮೇಲೆ ಅವಮಾನವಾಗುವ ರೀತಿ ಬರೆಯುವ ಪ್ರಕರಣಗಳು ಕಂಡು ಬಂದಲ್ಲಿ ಪೊಲೀಸ್ ಇಲಾಖೆ ನೇರವಾಗಿ ಸ್ವ- ಹಿತಾಸಕ್ತಿಯಿಂದ ಎಫ್‌ಐಆರ್ ದಾಖಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಮೈಕ್ರೋ ಫೈನಾನ್ಸ್ ಬಗ್ಗೆ ಬರುವ ದೂರನ್ನು ಪರಿಶೀಲಿಸಲು ಜಿಲ್ಲಾ ಮಟ್ಟದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ತಾಲೂಕು ಮಟ್ಟದಲ್ಲಿ ಸಹ ತಾಲೂಕು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು. ಸಾಲ ವಸೂಲಾತಿ ಮಾಡಲು ಆರ್‌ಬಿಐ ನಿಯಮಗಳಿವೆ. ನಿಯಮ ಉಲ್ಲಂಘಿಸಿದರೆ ಮೈಕ್ರೋ ಫೈನಾನ್ಸ್ ವಿರುದ್ಧ ಸ್ಥಳೀಯವಾಗಿ ದೂರು ದಾಖಲಿಸುವುದರ ಜತೆಗೆ ಕ್ರಮ ಕೈಗೊಳ್ಳುವಂತೆ ಆರ್‌ಬಿಐಗೆ ಪತ್ರ ಬರೆಯಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಲೂಕು ಮಟ್ಟದಲ್ಲಿ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಸಭೆ ನಡೆಸಿ ಸ್ಥಳೀಯವಾಗಿ ಮೈಕ್ರೋ ಫೈನಾನ್ಸ್ ಹಾಗೂ ಸಾಲ ಪಡೆದವರ ನಡುವೆ ಯಾವುದಾದರೂ ದೂರು ಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿ, ಸಾಲ ನೀಡುವಾಗ ಸಾಲ ಮರುಪಾವತಿ ಸಾಮರ್ಥ್ಯದ ಬಗ್ಗೆ ತಿಳಿದುಕೊಳ್ಳದೆ ಸಾಲ ನೀಡುವುದು. ಮೂರು ಅಥವಾ ನಾಲ್ಕು ಮೈಕ್ರೋ ಫೈನಾನ್ಸ್‌ಗಳು ಒಬ್ಬರಿಗೆ ಸಾಲ ನೀಡುವುದು ತಪ್ಪು. ಮೈಕ್ರೋ ಫೈನಾನ್ಸ್‌ಗೆ 2 ಲಕ್ಷ ರೂ.ವರೆಗೆ ಮಾತ್ರ ಸಾಲ ನೀಡಲು ಅವಕಾಶವಿದೆ. ಸಾಲ ನೀಡುವ ಸಂದರ್ಭದಲ್ಲಿ ಅರ್ಜಿ ಹಾಗೂ ಷರತ್ತು ಕನ್ನಡ ಭಾಷೆಯಲ್ಲಿರಬೇಕು. ಸಾಲ ನೀಡುವ ಸಂದರ್ಭದಲ್ಲಿ ಸಾಲ ಪಡೆಯುವವರಿಗೆ ಸಾಲ ಮರುಪಾವತಿಯ ಷರತ್ತು ವಿವರಿಸಿ, ಅದರ ವಿಡಿಯೋ ಮಾಡಿಕೊಳ್ಳಬೇಕು ಎಂದರು.

ಸಾಲ ವಸೂಲಾತಿಗೆ ಬೆಳಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಅವಕಾಶವಿದೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಿ ಸಾಲ ವಸೂಲಾತಿಗೆ ತೆರಳಬೇಕು, ಸೌಜನ್ಯದಿಂದ ವರ್ತಿಸಬೇಕು ಈ ಬಗ್ಗೆ ಮೈಕ್ರೋ ಫೈನಾನ್ಸ್ ಮುಖ್ಯಸ್ಥರು ಸಿಬ್ಬಂದಿಗೆ ತರಬೇತಿ ನೀಡುವಂತೆ ತಿಳಿಸಿದರು.

ಜಿಲ್ಲಾಡಳಿತ ಈ ಹಿಂದೆ ಎರಡು ಬಾರಿ ಮೈಕ್ರೋ ಫೈನಾನ್ಸ್ ಗಳ ಮುಖ್ಯಸ್ಥರ ಸಭೆ ಕರೆದು ಸಲಹೆಗಳನ್ನು ನೀಡಿತ್ತು. ಆದರೂ ಅವಾಚ್ಯ ಪದಗಳಿಂದ ನಿಂದನೆ ಮಾಡುತ್ತಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಹಲವಾರು ದೂರುಗಳು ಬರುತ್ತಿದ್ದು, ಮೈಕ್ರೋ ಫೈನಾನ್ಸ್ ಗಳು ತಮ್ಮ ಕಾರ್ಯವೈಖರಿಯನ್ನು ಬದಲಾಯಿಸಿಕೊಳ್ಳಬೇಕು, ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿ, ಪ್ರತಿ ವಾರ ವಸೂಲಾತಿ ಮಾಡಿದರೆ ಸಾಲ ಪಡೆದವರಿಗೂ ವಾಪಸ್ ನೀಡುವುದು ಕಷ್ಟಕರ. ಇದನ್ನು ಮಾಸಿಕ ನಿಯಮಕ್ಕೆ ಬದಲಾವಣೆ ಮಾಡಿಕೊಳ್ಳುವುದು ಉತ್ತಮ. ಕಷ್ಟದಲ್ಲಿದ್ದಾಗ ಅದರ ಪರಿಹಾರಕ್ಕೆ ಸಾಲ ಪಡೆದುಕೊಳ್ಳುತ್ತಾರೆ. ನೀವು ನೀಡಿದ ಸಾಲದ ಮೊತ್ತದಿಂದಲೇ ಒಂದು ಅಥವಾ ಎರಡು ಕಂತನ್ನು ಮರುಪಾವತಿ ಮಾಡುತ್ತಾರೆ. ಮೈಕ್ರೋ ಫೈನಾನ್ಸ್‌ಗಳು ಸಾಲ ನೀಡುವಾಗ ಸಿಬಿಲ್ ಸ್ಕೋರ್‌ಗಳನ್ನು ನೋಡಿ ಸಾಲ ನೀಡಬೇಕು ಎಂದು ಹೇಳಿದರು.

ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್‌ಪಿಗಳಾದ ಮುರಳಿ, ಕೃಷ್ಣಪ್ಪ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net