

ಗಂಗೊಳ್ಳಿ: ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಗುಂಡಿಗಳನ್ನು ಮುಚ್ಚುವಂತೆ ಐಆರ್‌ಬಿ ಅಧಿಕಾರಿಗಳಿಗೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸೂಚಿಸಿದರು. ಕುಂದಾಪುರ ಶಾಸಕರ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಐಆರ್‌ಬಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆ ನೀರು ಸೂಕ್ತ ರೀತಿಯಲ್ಲಿ ಚರಂಡಿಗೆ ಹರಿದು ಹೋಗದೆ ರಸ್ತೆಯಲ್ಲಿಯೇ ಹರಿಯುತ್ತಿದೆ. ಪರಿಣಾಮ ಡಾಂಬರು ಸವೆತದಿಂದಾಗಿ ಹೊಂಡ ನಿರ್ಮಾಣವಾಗಿ ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಆದ್ದರಿಂದ ಹೆದ್ದಾರಿಯಲ್ಲಿ ಆಗಿರುವ ಗುಂಡಿಗಳನ್ನು ಮುಚ್ಚುವ ಜತೆಗೆ ಸಾರ್ವಜನಿಕರ ಮನವಿಯಂತೆ ಅಗತ್ಯ ಸ್ಥಳಗಳಲ್ಲಿ ಸೂಚನಾಫಲಕ, ಚರಂಡಿಗಳ ಬಗ್ಗೆ ಹಾಗೂ ಸಮರ್ಪಕ ಬೀದಿದೀಪಗಳ ಅಳವಡಿಕೆ ಹಾಗೂ ಸರ್ವೀಸ್ ರಸ್ತೆ ನಿರ್ಮಿಸುವ ಕುರಿತು ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಐಆರ್‌ಬಿ ಅಧಿಕಾರಿಗಳು ಹಾಗೂ ಕುಂದಾಪುರ ಪುರಸಭೆ ಮುಖ್ಯಾಧಿಕಾರಿಗೆ ಶಾಸಕರು ಸೂಚಿಸಿದರು. ವಿವಿಧ ಸಂಘಟನೆ ಹಾಗೂ ಪಕ್ಷದ ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.