ಶಾಲಾಭಿವೃದ್ಧಿಗೆ ಸಿಎಸ್‌ಆರ್ ಅನುದಾನ ಬಳಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ

Meeting with head teachers and company heads Mandya
Published on

ಮಂಡ್ಯ: ಜಿಲ್ಲೆಯಲ್ಲಿ ಅಭಿವೃದ್ಧಿಪಡಿಸಬೇಕಿರುವ 16 ಸರ್ಕಾರಿ ಶಾಲೆ ಗುರುತಿಸಲಾಗಿದೆ, ಖಾಸಗಿ ಸಂಸ್ಥೆಗಳು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‌ಆರ್) ಅನುದಾನದಡಿ ಶಾಲೆಗಳನ್ನು ಅಥವಾ ಖಾಸಗಿ ಸಂಸ್ಥೆಗಳು ಇಚ್ಛಿಸುವ ಯಾವುದಾದರೂ ಶಾಲೆಗಳನ್ನು ಅಭಿವೃದ್ಧಿ ಪಡಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮುಖ್ಯ ಶಿಕ್ಷಕರು ಹಾಗೂ ಕಂಪನಿ ಮುಖ್ಯಸ್ಥರೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಿಎಸ್‌ಆರ್ ಅನುದಾನದಿಂದ ಅಭಿವೃದ್ಧಿಪಡಿಸುವ ಶಾಲೆಯ ನಾಮಫಲಕದಲ್ಲಿ ಸಂಸ್ಥೆಯ ಹೆಸರು ಹಾಕಲಾಗುತ್ತದೆ ಎಂದು ತಿಳಿಸಿದರು.

ಈಗಾಗಲೇ ಜಿಲ್ಲೆಯಲ್ಲಿ ಅಭಿವೃದ್ಧಿಗಾಗಿ ಗುರುತಿಸಲಾಗಿರುವ 16 ಶಾಲೆಗಳನ್ನು ಯಾವ ಸಂಸ್ಥೆಯವರು ವಹಿಸಿಕೊಳ್ಳುತ್ತಿದ್ದಾರೆ ಎಂಬುದರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಿ. ಖಾಸಗಿ ಸಂಸ್ಥೆಗಳು ಶಾಲೆಗಳ ಅಭಿವೃದ್ಧಿ ಕಾಮಗಾರಿಯನ್ನು ವಹಿಸಿಕೊಂಡ ನಂತರ ಯಾವುದೇ ವಿಳಂಬ ಮಾಡದೆ ಪೂರ್ಣಗೊಳಿಸಬೇಕು. ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಖಾಸಗಿ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಂಪರ್ಕದಲ್ಲಿದ್ದು, ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.

ಮಾರಗೌಡನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಸೂಕ್ತವಾಗಿ ಊಟ ಮಾಡಲು ಚಾವಣಿ ನಿರ್ಮಿಸಲಾಗಿದೆ. ಆದರೆ ಕುಳಿತುಕೊಂಡು ಊಟ ಮಾಡಲು ಸರಿಯಾದ ನೆಲಹಾಸಿನ ವ್ಯವಸ್ಥೆ ಇಲ್ಲ. ಅಲ್ಲಿ ವಿದ್ಯಾರ್ಥಿಗಳು ಕುಳಿತುಕೊಂಡು ಊಟ ಮಾಡಲು ಸರಿಯಾದ ವ್ಯವಸ್ಥೆ ಕಲ್ಪಿಸಿ ಎಂದು ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಸಿಎಸ್‌ಆರ್ ಅನುದಾನದ ಮೂಲಕ ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್, ಸ್ಮಾರ್ಟ್ ಕ್ಲಾಸ್‌ಗೆ ಉಪಕರಣಗಳು, ನೋಟ್ ಬುಕ್ಸ್ ನೀಡಬೇಡಿ. ಅವೆಲ್ಲವನ್ನು ಸರ್ಕಾರವೇ ನೀಡಲಿದೆ. ಇದರ ಬದಲು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಗೃಹ ಇಲ್ಲದ ಶಾಲೆ, ದುರಸ್ಥಿಗೊಳಿಸಬೇಕಾಗಿರುವ ಶಾಲೆ, ಕಾಂಪೌಂಡ್ ಇಲ್ಲದ ಶಾಲೆಗಳನ್ನು ಗುರುತಿಸಿ ಪಟ್ಟಿ ಮಾಡಿ ಕೊಡಿ. ಸಿಎಸ್‌ಆರ್ ಅನುದಾನದಡಿ ಅವುಗಳನ್ನು ಅಭಿವೃದ್ಧಿಪಡಿಸಲಾಗುವುದು. ಕಾಂಪೌಂಡ್ ನಿರ್ಮಿಸಿದ ನಂತರ ಸಾಹಿತ್ಯಕ್ಕೆ ಸಂಬಂಧಿಸಿದ ಚಿತ್ರಗಳು ಹಾಗೂ ಅಭಿವೃದ್ಧಿಪಡಿಸಿದ ಸಂಸ್ಥೆ ಹೆಸರನ್ನು ಬರೆಸಿ ಎಂದು ಹೇಳಿದರು.

ಖಾಸಗಿ ಕಂಪನಿಗಳು ತಲಾ 5 ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಂಡು ಸಿಎಸ್‌ಆರ್ ಅನುದಾನದ ಮೂಲಕ ಅಲ್ಲಿನ ಮಹಿಳೆಯರಿಗೆ ಉತ್ತಮ ಗುಣಮಟ್ಟದ ಮುಟ್ಟಿನ ಕಪ್ ನೀಡುವ ಮೂಲಕ ಪ್ಯಾಡ್ ಮುಕ್ತ ಗ್ರಾಮ ಪಂಚಾಯಿತಿಯನ್ನಾಗಿ ಮಾಡಿ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳನ್ನು ಮುಟ್ಟಿನ ಸಂದರ್ಭದಲ್ಲಿ ದೀರ್ಘಕಾಲ ಶಾಲೆಗೆ ಕಳಿಸುವುದಿಲ್ಲ. ಇದರಿಂದ ಅವರ ವಿದ್ಯಾಭ್ಯಾಸದಲ್ಲಿ ಹಿಂದುಳಿಯುತ್ತಾರೆ. ಪ್ಯಾಡ್‌ಗಳನ್ನು ಬಳಸುವುದರಿಂದ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಇದರ ಕುರಿತಾಗಿ ಜಾಗೃತಿ ಮೂಡಿಸಿ. ಪ್ಯಾಡ್ ಬದಲು ಮುಟ್ಟಿನ ಕಪ್ ಬಳಸಲು ಅರಿವು ಮೂಡಿಸಿ ಎಂದು ಸೂಚನೆ ನೀಡಿದರು.

ಸಭೆಯಲ್ಲಿ ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆ ಉಪನಿರ್ದೇಶಕ ದಿನೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಟಿ.ಸೌಭಾಗ್ಯಾ, ಚಂದ್ರಕಾಂತ್, ಉಮಾ, ಚಂದ್ರಶೇಖರ್ ಸೇರಿದಂತೆ ವಿವಿಧ ಖಾಸಗಿ ಸಂಸ್ಥೆಗಳು ಮುಖ್ಯಸ್ಥರುಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net