

ಮಂಡ್ಯ: ಸರ್ಕಾರದ ಎಲ್ಲ ಸೌಲಭ್ಯ ಜೀತವಿಮುಕ್ತ ಕುಟುಂಬದವರಿಗೆ ತಲುಪಬೇಕು ಎಂಬ ಸದುದ್ದೇಶದಿಂದ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಹದಿಮೂರು ಸರ್ಕಾರಿ ದಾಖಲೆಗಳನ್ನು ಒದಗಿಸಲು ‘ನನ್ನ ಗುರುತು ಎಂಬ ವಿಶೇಷ ಅಭಿಯಾನ’ವನ್ನು ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಹೇಳಿದರು.
ನಗರದ ಜಿಪಂ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಜೀತ ವಿಮುಕ್ತರನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಜೀತವಿಮುಕ್ತರ ಸಂಘಟನೆಗಳೊಂದಿಗೆ ಆಯೋಜಿಸಲಾಗಿದ್ದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಭಿಯಾನವನ್ನು ಯಶಸ್ವಿಗೊಳಿಸಲು ಜಿಲ್ಲೆಯಲ್ಲಿರುವ ಜೀತವಿಮುಕ್ತಗೊಂಡ ವ್ಯಕ್ತಿಗಳ ಮಾಹಿತಿಯನ್ನು ಸಂಗ್ರಹಿಸಿ ಒಂದು ತಿಂಗಳೊಳಗಾಗಿ ವರದಿ ನೀಡಬೇಕು ಎಂದು ಪಿಡಿಒಗಳಿಗೆ ಸೂಚಿಸಿದರು.
ಜುಲೈ ಮಾಹೆಯಲ್ಲಿ ಸಭೆಯನ್ನು ನಡೆಸಿ ವಿಶೇಷ ಅಭಿಯಾನದ ದಿನಾಂಕ ತಿಳಿಸಲಾಗುವುದು. ಪ್ರತಿ ತಾಲೂಕಿನಲ್ಲಿ ಸಮೀಕ್ಷೆ ನಡೆಸಿ ನಿವೇಶನ ಹಾಗೂ ವಸತಿ ರಹಿತರ ಪಟ್ಟಿಯನ್ನು ತಯಾರಿಸಿ. ವಿಶೇಷ ಅಭಿಯಾನ ಕುರಿತು ಜೀತವಿಮುಕ್ತ ಕುಟುಂಬದವರಿಗೆ ಮಾಹಿತಿ ನೀಡಿ. ಜೀತವಿಮುಕ್ತರಿಗೆ ಸಾಧ್ಯವಾದಷ್ಟು ಸ್ಥಳೀಯ ಮಟ್ಟದಲ್ಲಿ ಪುನರ್ವಸತಿ ಕಲ್ಪಿಸಿಕೊಡಲು ಪ್ರಯತ್ನಿಸಿ ಮತ್ತು 13 ಸರ್ಕಾರಿ ದಾಖಲೆಗಳೊಂದಿಗೆ ಇ-ಆಸ್ತಿ ಖಾತೆಯನ್ನು ಸಹ ಕಲ್ಪಿಸಿಕೊಡಿ ಎಂದರು.
ಜೀತ ಮಾಡುವುದು ಕಾನೂನು ಬಾಹಿರ. ವಂಶ ಪಾರಂಪರಿಕವಾಗಿ ಜೀತ ಮಾಡುತ್ತಿರುವುದು ಕಂಡು ಬಂದಲ್ಲಿ ಕ್ರಮಕೈಗೊಳ್ಳಿ ಹಾಗೂ ಜೀತವಿಮುಕ್ತ ಕುಟುಂಬದ ಮಕ್ಕಳು ಜೀವನ ರೂಪಿಸಿಕೊಳ್ಳಲು ವಿವಿಧ ಕೌಶಲ ತರಬೇತಿ ಒದಗಿಸಿ. ಜೀತವಿಮುಕ್ತ ಕುಟುಂಬದ ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು. ಈ ನಿಟ್ಟಿನಲ್ಲಿ ಕಂಪ್ಯೂಟರ್ ಬಳಕೆ ಕೌಶಲ, ಸಂವಹನ ಕೌಶಲ ಹಾಗೂ ಚಾಲ್ತಿಯಲ್ಲಿರುವ ಇನ್ನಿತರ ಕೌಶಲ ಗುರುತಿಸಿ ತರಬೇತಿ ನೀಡಿ ಉದ್ಯೋಗ ಕಲ್ಪಿಸಿ ಎಂದು ಹೇಳಿದರು.
ವಿಶೇಷ ಅಭಿಯಾನದಲ್ಲಿ ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಇ-ಶ್ರಮ್ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಖಾತೆ, ಸಾಮಾಜಿಕ ಪಿಂಚಣಿ, ಪಿ.ಎಂ.ಜೆ.ಜೆ.ಬಿ.ವೈ, ಪಿ.ಎಂ.ಎಸ್.ಬಿ.ವೈ, ಯು.ಡಿ.ಐ.ಡಿ, ನರೇಗಾ ಜಾಬ್ ಕಾರ್ಡ್ ಹಾಗೂ ಅಭಾ ಕಾರ್ಡ್ ನೀಡಲಾಗುವುದು ಎಂದು ವಿವರಿಸಿದರು.
ಸಭೆಯಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಧನುಷ್, ಉಪಕಾರ್ಯದರ್ಶಿ ಲಕ್ಷ್ಮೀ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜೀತವಿಮುಕ್ತ ಸಂಘಟನೆಗಳ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.