ನೋಂದಣಿಯಾಗುವ ಪ್ರತಿನಿಧಿಗಳಿಗೆ ಸಿಹಿ ಬೆಲ್ಲ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

Meeting with FPO Unit Head Mandya
Published on

ಮಂಡ್ಯ: ಅಖಿಲ ಭಾರತ ಕನ್ಮಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ನೋಂದಣಿಯಾಗುವ ಸದಸ್ಯರಿಗೆ ಮಂಡ್ಯ ಜಿಲ್ಲೆಯ ಸವಿ ನೆನಪಿಗಾಗಿ ಬೆಲ್ಲವನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೆಲ್ಲ ತಯಾರಿಕಾ ಎಫ್‌ಪಿಒ ಘಟಕದ ಮುಖ್ಯಸ್ಥರೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೋಂದಣಿಯಾದ ಪ್ರತಿನಿಧಿಗಳಿಗೆ ಬೆಲ್ಲ ನೀಡುವುದರಿಂದ ಜನರಿಗೆ ಬೆಲ್ಲದ ಬಗ್ಗೆ ಹೆಚ್ಚಿನ ಪ್ರಚಾರವಾಗುತ್ತದೆ. ಸಮ್ಮೇಳನಕ್ಕೆ ಸುಮಾರು 10 ಸಾವಿರ ಜನರು ನೋಂದಣಿಯಾಗುವ ನಿರೀಕ್ಷೆ ಇದೆ. ಪ್ರತಿನಿಧಿ ಹಾಗೂ ಗಣ್ಯರಿಗೆ ತಲಾ ಅರ್ಧ ಕೆ.ಜಿ ಬೆಲ್ಲ ನೀಡಿದರೆ ಸುಮಾರು 6 ರಿಂದ 7 ಸಾವಿರ ಕೆ.ಜಿ ಬೆಲ್ಲ ಬೇಕಾಗುತ್ತದೆ ಎಂದರು.

ಬೆಲ್ಲ ತಯಾರಿಕೆ ಘಟಕಗಳು ಉತ್ತಮವಾಗಿ ಪ್ಯಾಕ್ ಮಾಡಿ ಅದರ ಮೇಲೆ ಕನ್ನಡ ಸಾಹಿತ್ಯ ಸಮ್ಮೇಳನದ ಲೋಗೋ ಮುದ್ರಣ ಮಾಡಿಸಬೇಕು. ಮುಖ್ಯವಾಗಿ ಎಲ್ಲರೂ ಒಂದೇ ರೀತಿ ಪ್ಯಾಕ್ ಮಾಡಿ ನೀಡಬೇಕು. ಒಂದು ಉತ್ತಮ ದರ ನಿಗದಿ ಮಾಡಿ ಬೆಲ್ಲ ನೀಡಲು ಮುಂದೆ ಬರುವವರು ಕೃಷಿ ಜಂಟಿ ನಿರ್ದೇಶಕರಿಗೆ ಮಾಹಿತಿ ನೀಡುವಂತೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ರಾಜ್ಯ ಸೇರಿದಂತೆ ಹಲವೆಡೆಯಿಂದ ಪ್ರತಿನಿಧಿಗಳು ಆಗಮಿಸುತ್ತಾರೆ. ಆದ್ದರಿಂದ ಅವರಿಗೆ ಗುಣಮಟ್ಟದ ಬೆಲ್ಲವನ್ನು ನೀಡಬೇಕು. ಇದರಿಂದ ಜಿಲ್ಲೆಯ ಹೆಸರು ಎಲ್ಲ ಕಡೆ ಪಸರಿಸುತ್ತದೆ ಎಂದರು.

ಸಭೆಯಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ಎಫ್‌ಪಿಒ ಘಟಕದ ಮುಖ್ಯಸ್ಥ ಕಾರಸವಾಡಿ ಮಹದೇವು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net