

ಮಂಡ್ಯ: ಮೈಶುಗರ್ ಕಾರ್ಖಾನೆಯಲ್ಲಿ ರೈತರಿಗೆ ಕುಡಿಯುವ ನೀರಿನ ಆರ್‌ಒ ಅಳವಡಿಸುವಂತೆ ಹಾಗೂ ಮೂಲ ಸೌಕರ್ಯ ಒದಗಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೈಶುಗರ್ ಕಾರ್ಖಾನೆಗೆ ಸಂಬಂಧಿಸಿದಂತೆ ರೈತ ಮುಖಂಡರೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ಮಾತನಾಡಿದ ರೈತರು, ಬಾಯ್ಲರ್ ತೊಂದರೆಯಿಂದ ಕಬ್ಬು ಹರಿಯುವ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆ. ಇದರಿಂದ ರೈತರು ಎತ್ತಿನಗಾಡಿ ಹಾಗೂ ಕಬ್ಬಿನೊಂದಿಗೆ ಮೈಶುಗರ್ ಹೊರ ಆವರಣದಲ್ಲಿ ಕಾಯುವ ಪರಿಸ್ಥಿತಿ ಎದುರಾಗಿದೆ. ಕಬ್ಬು ಹರಿಯುವಿಕೆ ಕುರಿತು ಸರಿಯಾದ ಮಾಹಿತಿ ದೊರೆಯುತ್ತಿಲ್ಲ ಹಾಗೂ ಇನ್ನಿತರೆ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿದರು.
ಜಿಲ್ಲಾಧಿಕಾರಿ ಮಾತನಾಡಿ, ಮೈಶುಗರ್ ಹೊರಾವರಣದಲ್ಲಿ ಪ್ರತಿ ದಿನ ಕಬ್ಬು ಹರಿಯುವಿಕೆಯ ಮಾಹಿತಿಯನ್ನು ಅನಾವರಣಗೊಳಿಸಬೇಕು. ಒಬ್ಬರು ಗಾರ್ಡ್ ಮತ್ತು ಸೂಪರ್‌ವೈಸರ್ ಅನ್ನು ಮಾಹಿತಿ ನೀಡಲು ನೇಮಕ ಮಾಡಬೇಕು. ಕುಡಿಯುವ ನೀರು, ಶೌಚಗೃಹದ ವ್ಯವಸ್ಥೆಯಾಗಬೇಕು. ಕೂಡಲೇ ಕ್ಯಾಂಟೀನ್ ತೆರೆಯಲು ಸ್ಥಳದ ವ್ಯವಸ್ಥೆ ಮಾಡಿ. ಆಸಕ್ತರು ಇಚ್ಛಿಸಿದಲ್ಲಿ ತೆರೆಯಲು ಅವಕಾಶ ಮಾಡಿಕೊಡಿ. ಇದರಿಂದ ರೈತರು ಆಹಾರ ಖರೀದಿಸಲು ದೂರದ ಸ್ಥಳಕ್ಕೆ ತೆರಳುವುದು ತಪ್ಪುತ್ತದೆ ಎಂದರು.
ಕಬ್ಬು ಹರಿಯುವಿಕೆಯ ವೇಗ ಕಡಿಮೆ ಇದ್ದು, ಪ್ರತಿದಿನ 2400 ರಿಂದ 2500 ಟನ್ ಕಬ್ಬು ಹರಿಯುವ ರೀತಿ ವೇಗ ಹೆಚ್ಚಿಸಿಕೊಳ್ಳಲು ಕ್ರಮ ವಹಿಸಬೇಕು. ಸುತ್ತ ಮುತ್ತಲಿನ ಸಕ್ಕರೆ ಕಾರ್ಖಾನೆಯಲ್ಲಿ ಸಕ್ಕರೆ ರಿಕವರಿ 9.6 ರಿಂದ 9.7 ಇದೆ. ಆದರೆ ಮೈಶುಗರ್‌ನಲ್ಲಿ ಕಡಿಮೆ ಇದೆ. ಈ ಕುರಿತಂತೆ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದರು.
ಮೈಶುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ ಅವರು ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಹಾಗೂ ಕಾರ್ಖಾನೆಯ ಇನ್ನಿತರೆ ವಿಷಯಗಳ ಬಗ್ಗೆ ವಿವರಿಸಿದರು. ಮೈಶುಗರ್ ವ್ಯವಸ್ಥಾಪಕ ನಿರ್ದೇಶಕ ಮಂಗಲ್ ದಾಸ್, ಜನರಲ್ ಮ್ಯಾನೇಜರ್(ತಾಂತ್ರಿಕ) ಅಪ್ಪಾ ಸಾಹೇಬ್ ಪಾಟೀಲ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಪ್ರತೀಕ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಕೆ.ಬೋರಯ್ಯ, ಚಂದ್ರಶೇಖರ್ ಇತರರಿದ್ದರು.