

ಮಂಡ್ಯ: ಜಿಲ್ಲೆಯಲ್ಲಿ ದೇವಸ್ಥಾನ, ಚರ್ಚ್ ಮತ್ತು ಮಸೀದಿಯಲ್ಲಿ ಬಾಲ್ಯವಿವಾಹ ನಡೆಯುವುದು ಕಂಡುಬಂದಲ್ಲಿ ನೇರವಾಗಿ ಮುಖ್ಯಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲಾ ಮತ್ತು ತಾಲೂಕು ಮಟ್ಟದ ಬಾಲ್ಯವಿವಾಹ ನಿಷೇಧಾಧಿಕಾರಿಗಳೊಂದಿಗೆ ಆಯೋಜಿಸಲಾಗಿದ್ದ ಬಾಲ್ಯ ವಿವಾಹ ಮುಕ್ತ ಜಿಲ್ಲೆ ಘೋಷಣೆ ಕುರಿತ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ಜಾಗೃತಿ ಜಾಥಾ, ಕಾರ್ಯಕ್ರಮ ಆಯೋಜಿಸಿ. ವಿದ್ಯಾರ್ಥಿನಿಯರು ಹಾಗೂ ಅವರ ಪಾಲಕರಿಂದ ಬಾಲ್ಯ ವಿವಾಹ ಪ್ರೋತ್ಸಾಹಿಸುವುದಿಲ್ಲ, ತಡೆಗಟ್ಟುತ್ತೇವೆಂದು ಪ್ರತಿಜ್ಞೆ ಮಾಡಿಸಿ ಎಂದು ತಿಳಿಸಿದರು.
ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಾಲ್ಯವಿವಾಹದ ಪ್ರಕರಣದಲ್ಲಿ ಪತ್ತೆಯಾಗಿದ್ದು, ಪ್ರಾಂಶುಪಾಲರು ಹೆಣ್ಣುಮಕ್ಕಳ ಗೈರು ಹಾಜರಾತಿ ಹಾಗೂ ಸುತ್ತಮುತ್ತ ಉಂಟಾಗುವ ಬಾಲ್ಯವಿವಾಹ ಪ್ರಕರಣವನ್ನು ಗಮನಿಸಬೇಕು. ತಮ್ಮ ಶಾಲೆಯ ವಿದ್ಯಾರ್ಥಿನಿಯರನ್ನು ಬಾಲ್ಯ ವಿವಾಹದಿಂದ ರಕ್ಷಿಸಲು ಪ್ರೌಢ ಶಾಲೆಯ ಪ್ರಾಂಶುಪಾಲರು ಕ್ರಮ ಕೈಗೊಳ್ಳಿ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಶಾಲೆ, ಕುಟುಂಬ ಮತ್ತು ಸಮಾಜದಿಂದ ಉಂಟಾಗುವ ಸಮಸ್ಯೆ ಮತ್ತು ಅವರ ಅಗತ್ಯತೆ ತಿಳಿಯಲು ಶಾಲೆ ಮತ್ತು ವಿದ್ಯಾರ್ಥಿನಿಲಯಗಳಲ್ಲಿ ದೂರು ಸಲಹಾ ಪೆಟ್ಟಿಗೆಯನ್ನು ಕಡ್ಡಾಯವಾಗಿ ಇರಿಸಿ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಬಾಲ್ಯವಿವಾಹ ಸಂಭವಿಸುವ ಸಾಧ್ಯತೆಯಿರುವುದರಿಂದ ಗ್ರಾಮೀಣ ಮಹಿಳೆಯರಿಗೆ ಜಾಗೃತಿ ಮೂಡಿಸುವ ಸಲುವಾಗಿ ಸ್ವ ಸಹಾಯ ಸಂಘಗಳಲ್ಲಿ ಸಮಾವೇಶ ನಡೆಸಿ. ಬಾಲ್ಯವಿವಾಹದ ದುಷ್ಪರಿಣಾಮ ಕುರಿತು ಒಂದು ಸಾಕ್ಷ್ಯ ಚಿತ್ರ ತಯಾರಿಸಿ ಹಳ್ಳಿಗಳಲ್ಲಿ ಪ್ರದರ್ಶಿಸಿ ಎಂದು ಸೂಚಿಸಿದರು.
ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಆನಂದ್ ಮಾತನಾಡಿ, ಪ್ರತಿ ತಿಂಗಳು ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಪಾಲಕರ ಸಭೆ ನಡೆಸಿ. ಬಾಲ್ಯವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿಗಳಿಂದ ಉಂಟಾಗುವ ಪರಿಣಾಮ, ಸರ್ಕಾರದಿಂದ ವಿಧಿಸುವ ದಂಡ, ಶಿಕ್ಷೆ ಹಾಗೂ ಪೋಕ್ಸೋ ಕಾಯ್ದೆ ಕುರಿತು ಜಾಗೃತಿ ಮೂಡಿಸಿ. ಬಾಲ್ಯವಿವಾಹ ಪ್ರೋತ್ಸಾಹಿಸಿದರೆ ವಿಧಿಸಲಾಗುವ ಶಿಕ್ಷೆ, ಸಹಾಯವಾಣಿ ಸಂಖ್ಯೆ, ಪೋಕ್ಸೋ ಕಾಯ್ದೆಗಳನ್ನು ಒಳಗೊಂಡಂತೆ ಜಾಗೃತಿ ಫಲಕಗಳನ್ನು ಕಾರ್ಮಿಕರಿರುವ ಸ್ಥಳ, ಸ್ಲಂ, ಗಾರ್ಮೆಂಟ್ಸ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಿ ಎಂದರು.
ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ(ಆಡಳಿತ) ಎಂ.ಬಾಬು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಶ್ಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಮೂರ್ತಿ ಇತರರಿದ್ದರು.