

ಮಂಡ್ಯ: ಬ್ಯಾಂಕ್‌ನಲ್ಲಿ ಸಾಲ ಪಡೆದ ನಂತರ ಪ್ರತಿ ಮಾಹೆ ಖಾತೆಯಿಂದ ನಿಗದಿತ ದಿನಾಂಕದಂದು ಸ್ವಯಂಚಾಲಿತವಾಗಿ ಕಟಾವು ಆಗುತ್ತದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ವ್ಯವಸ್ಥಾಪಕರು ಕೇಂದ್ರ ಕಚೇರಿಗೆ ಪತ್ರ ಬರೆದು ಸರ್ಕಾರದ ಪ್ರೋತ್ಸಾಹ ಧನವನ್ನು ಸಾಲಕ್ಕೆ ಕಟಾವು ಮಾಡದ ಸಾಫ್ಟ್‌ವೇರ್ ಅಳವಡಿಸಿ ಎಂದು ಮೇಲುಕೋಟೆ ಶಾಸಕ ದರ್ಶನ ಪುಟ್ಟಣಯ್ಯ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಬ್ಯಾಂಕ್‌ಗಳ ವ್ಯವಸ್ಥಾಪಕರೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ಅಥವಾ ಸಾರ್ವಜನಿಕರಿಗೆ ಸರ್ಕಾರದಿಂದ ನೀಡುವ ಪ್ರೋತ್ಸಾಹ ಧನ ಸಾಲದ ಇಎಂಐಗೆ ಕಟಾವು ಮಾಡಿಕೊಂಡ ನಂತರ ಸಂಬಂಧಿಸಿದವರು ಬ್ಯಾಂಕ್‌ಗೆ ಬಂದು ತಿಳಿಸಿದಾಗ ಸಹಾಯಧನ ಖಾತೆಗೆ ಹಿಂದಿರುಗಿಸುವ ಬದಲು ಸಾಫ್ಟ್‌ವೇರ್ ಅಳವಡಿಸಿ. ಏಕೆಂದರೆ ಕೇವಲ ಶೇ.3ರಷ್ಟು ಜನ ಮಾತ್ರ ಬ್ಯಾಂಕಿಗೆ ತೆರಳಿ ಪ್ರಶ್ನಿಸುವ ಸಾಮರ್ಥ್ಯ ಹೊಂದಿರುತ್ತಾರೆ ಎಂದರು.
ಗ್ರಾಹಕರಿಂದಾಗಿ ಬ್ಯಾಂಕ್ ನಿರ್ವಹಣೆಯಾಗುತ್ತದೆ. ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿ ಬಡ ರೈತರು ಬ್ಯಾಂಕಿನ ಗ್ರಾಹಕರಾಗಿದ್ದು, ಅವರೊಂದಿಗೆ ಗೌರವದಿಂದ ವರ್ತಿಸಿ. ವ್ಯವಹಾರ ಹಾಗೂ ವಿವಿಧ ಮಾನದಂಡಗಳ ಬಗ್ಗೆ ಅವರಿಗೆ ಅರ್ಥವಾಗುವ ರೀತಿ ಕನ್ನಡದಲ್ಲಿ ತಿಳಿಸಿ ಎಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಸರ್ಕಾರದಿಂದ ನೀಡಲಾಗುವ ವಿವಿಧ ರೀತಿಯ ಸಾಮಾಜಿಕ ಪಿಂಚಣಿ, ಹಾಲಿನ ಪ್ರೋತ್ಸಾಹ ಧನ, ಅನ್ನಭಾಗ್ಯ, ಗೃಹಲಕ್ಷ್ಮೀ ಹಣ, ಮನರೇಗಾ ಕೂಲಿ, ಬೆಳೆ ನಷ್ಟದ ಹಣವನ್ನು ಮಾನವೀಯ ದೃಷ್ಠಿಯಿಂದ ಸಾಲದ ಮರುಪಾವತಿಗೆ ಕಟಾವು ಮಾಡಬೇಡಿ. ಮಂಡ್ಯ ರೈತರ ಜಿಲ್ಲೆಯಗಿದ್ದು, ಅವರೊಂದಿಗೆ ಕನ್ನಡದಲ್ಲಿ ವ್ಯವಹರಿಸಿ. ಬಹಳಷ್ಟು ಬ್ಯಾಂಕ್ ಸಿಬ್ಬಂದಿ ಹಾಗೂ ವ್ಯವಸ್ಥಾಪಕರಿಗೆ ಕನ್ನಡ ತಿಳಿದಿದ್ದರೂ ಆಂಗ್ಲ ಅಥವಾ ಹಿಂದಿಯಲ್ಲಿ ಮಾತನಾಡುತ್ತಾರೆ. ಈ ಧೋರಣೆ ಬದಲಾಗಬೇಕು ಎಂದರು.
ರೈತರು ಪಡೆಯುವ ಬೆಳೆ ಸಾಲವನ್ನು ನಿಗದಿತ ಅವಧಿಯಲ್ಲಿ ಪಾವತಿ ಮಾಡಿದರೆ ಬಡ್ಡಿಯ ಹಣದ ಶೇ.3ರಷ್ಟು ರಿಬೇಟ್ ಹಿಂದಿರುಗಿಸುವ ಯೋಜನೆಯಿದ್ದು, ಇದರ ಬಗ್ಗೆ ರೈತರಿಗೆ ಮಾಹಿತಿ ನೀಡಿ. ಬ್ಯಾಂಕ್‌ಗೆ ಸಂಬಂಧಿಸಿದಂತೆ ಗ್ರಾಹಕರ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಈ ಸೇವಾ ಕೇಂದ್ರಗಳಲ್ಲಿ ಸಿ.ಸಿ ಕ್ಯಾಮೆರಾದ ಅಳವಡಿಸುವುದು ಉತ್ತಮ. ಇದರಿಂದ ಗ್ರಾಹಕರಿಂದ ದೂರು ಬಂದಲ್ಲಿ ಪರಿಶೀಲಿಸಲು ಸುಲಭ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್‌ಕುಮಾರ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಲಿಂಗಪ್ಪಾಜಿ ಇದ್ದರು.