ಟ್ರಯಲ್ ಬ್ಲಾಸ್ಟ್ ಸಂಬಂಧ ವಕೀಲರೊಂದಿಗೆ ಚರ್ಚೆ: ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

Meeting regarding trail blast mandya
Published on

ಮಂಡ್ಯ: ರೈತರ ಹಿತವನ್ನು ಬದಿಗೊತ್ತಿ ಬೇಬಿಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡುವುದಿಲ್ಲ. ಈ ವಿಚಾರದಲ್ಲಿ ಸ್ಪಷ್ಟವಾಗಿದ್ದು, ಹೈಕೋರ್ಟ್ ಆದೇಶ ಕುರಿತಂತೆ ವಕೀಲರೊಂದಿಗೆ ಚರ್ಚಿಸಿ ಕಾನೂನು ಸಲಹೆ ಪಡೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಹೊಸ ಮೈಷುಗರ್ ಕಾರ್ಖಾನೆ ನಿರ್ಮಾಣ ಹಾಗೂ ಟ್ರಯಲ್ ಬ್ಲಾಸ್ಟ್‌ಗೆ ಸಂಬಂಧಿಸಿದಂತೆ ಗುರುವಾರ ರೈತರು ಹಾಗೂ ಸಂಘಟನೆಗಳ ಮುಖಂಡರೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಟ್ರಯಲ್ ಬ್ಲಾಸ್ಟ್‌ಗೆ ಎಲ್ಲರ ವಿರೋಧವಿದೆ. ಈ ಸಂಬಂಧ ರೈತರ ಅಭಿಪ್ರಾಯವನ್ನು ಗೌರವಿಸಿ ಕ್ರಮ ಕೈಗೊಳ್ಳುತ್ತೇವೆ. ನಿಮ್ಮನ್ನು ದಾಟಿ ಯಾವುದೇ ನಿರ್ಧಾರ ಮಾಡುವುದಿಲ್ಲ. ಆದ್ದರಿಂದ ಯಾರೂ ಆತಂಕಕ್ಕೆ ಒಳಗಾಗುವುದು ಎಂದು ಸ್ಪಷ್ಟಪಡಿಸಿದರು.

ಟ್ರಯಲ್ ಮಾಡುವುದೇ ಬೇಡ: ಸಭೆಯಲ್ಲಿ ಹಾಜರಿದ್ದ ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ರೈತ ಮುಖಂಡರು, ಟ್ರಯಲ್ ಬ್ಲಾಸ್ಟ್ ಬೇಡವೆಂದು ಸ್ಪಷ್ಟ ಅಭಿಪ್ರಾಯ ಮಂಡಿಸಿದರು.

ಕೆಆರ್‌ಎಸ್ ಅಣೆಕಟ್ಟೆ ಲಕ್ಷಾಂತರ ಜನರ ಬದುಕು. ಈ ವಿಚಾರದಲ್ಲಿ ನಿರ್ಲಕ್ಷೃ ಬೇಡ. ಗಣಿಗಾರಿಕೆ ಸ್ಥಗಿತಗೊಳಿಸಿರುವ ಆದೇಶದ ಪ್ರಶ್ನಿಸಿ 17 ಜನ ಗಣಿ ಮಾಲೀಕರು ಹೈಕೋರ್ಟ್‌ಗೆ ಹೋಗಿರಬಹುದು. ಆದರೆ ಅವರಿಗಾಗಿ ಲಕ್ಷಾಂತರ ಜನರ ಬದುಕು ಹಾಳು ಮಾಡುವುದು ಸರಿಯಲ್ಲ. ಟ್ರಯಲ್‌ನಲ್ಲಿ ಮಾಡುವ ಬ್ಲಾಸ್ಟ್ ಎಷ್ಟು ಆಳದ್ದು, ಗಣಿಗಾರಿಕೆಯಲ್ಲಿ ನಡೆಸುವ ಆಳದ ಬ್ಲಾಸ್ಟ್ ಎಷ್ಟು ಗೊತ್ತಿದೆಯೇ?. ಕಳೆದ 20 ದಿನದ ಹಿಂದೆ ಮಂಡ್ಯ ಮತ್ತು ಶ್ರೀರಂಗಪಟ್ಟಣದಲ್ಲಿ ಭಾರೀ ಶಬ್ಧ ಕೇಳಿಬಂತು. ಇದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆಯೇ?. ಈ ಆತಂಕಕಾರಿ ಶಬ್ಧಕ್ಕೆ ಕಾರಣ ಏನು ಎನ್ನುವುದೇ ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ಬ್ಲಾಸ್ಟ್ ವಿಚಾರದಲ್ಲಿ ಚರ್ಚೆ ಮಾಡುವ ಅಗತ್ಯವಿಲ್ಲ. ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಒಕ್ಕೊರಲ ಆಗ್ರಹ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಎಲ್ಲರ ಅಭಿಪ್ರಾಯವನ್ನೂ ಗೌರವಿಸುತ್ತೇವೆ. ಈ ಸಂಬಂಧ ನಾವು ಮುಂದೇನೂ ಮಾಡಬೇಕೆಂದು ವಕೀಲರೊಂದಿಗೆ ಮಾತನಾಡುತ್ತೇವೆ. ಅದೇ ರೀತಿ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಖಾಸಗಿಯಾಗಿ ಯಾರು ಬೇಕಾದರೂ ಮೇಲ್ಮನವಿ ಸಲ್ಲಿಸಬಹುದು ಎಂದು ಸಲಹೆ ನೀಡಿದರು.

ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ರಘುರಾಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net