ಮೈಷುಗರ್‌ನಲ್ಲಿ ಜೂನ್‌ನಿಂದ ಕಬ್ಬು ಅರೆಯುವಿಕೆ ಪ್ರಾರಂಭ: ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

Meeting regarding Mysugar factory mandya
Published on

ಮಂಡ್ಯ: ಹೊಸ ಮೈಷುಗರ್ ಕಾರ್ಖಾನೆ ಸ್ಥಾಪನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಆದರೆ, ಯಾವ ಜಾಗದಲ್ಲಿ ಮಾಡಬೇಕೆಂಬ ಬಗ್ಗೆಯೂ ನಿರ್ಧಾರ ಆಗಿಲ್ಲ. ಈ ನಿಟ್ಟಿನಲ್ಲಿ ರೈತರ ಅಭಿಪ್ರಾಯದಂತೆ ತಾಂತ್ರಿಕ ವರದಿ ತಯಾರು ಮಾಡಿಕೊಂಡು ಮುಂದುವರೆಯುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಹೊಸ ಕಾರ್ಖಾನೆ ಸ್ಥಳ ಬದಲಾವಣೆ, ಸಾಫ್ಟ್‌ವೇರ್ ಪಾರ್ಕ್‌ನ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಶಾಸಕ ರವಿಕುಮಾರ್ ಗಣಿಗ ಹೇಳಿದ್ದಾರೆ. ಹಾಗಾಗಿ ರೈತರಿಗೆ ಯಾವುದೇ ಆತಂಕ ಬೇಡ. ಹೊಸ ಕಾರ್ಖಾನೆ ಬೇಡ ಎಂದು ಕೆಲ ರೈತರು ಹೇಳಿದ್ದಾರೆ. ಎಲ್ಲ ಸರ್ಕಾರಗಳು ಕಾರ್ಖಾನೆಗೆ ಅನುದಾನ ನೀಡಿವೆ. 2017ರಲ್ಲಿ ಕಾರ್ಖಾನೆ ಸ್ಥಗಿತವಾಗಿತ್ತು. ಕಾರ್ಖಾನೆ ಖಾಸಗೀಕರಣದ ಚರ್ಚೆ ಕೂಡ ನಡೆದಿತ್ತು. ರೈತರು ಸೇರಿದಂತೆ ಎಲ್ಲರ ಹೋರಾಟದ ಫಲವಾಗಿ ಹಿಂದಿನ ಬಿಜೆಪಿ ಸರ್ಕಾರ ಖಾಸಗೀಕರಣ ಕೈ ಬಿಟ್ಟಿತ್ತು. ನಮ್ಮ ಕಾಂಗ್ರೆಸ್ ಸರ್ಕಾರದ ಬಂದಮೇಲೆ ಕಾರ್ಖಾನೆ ಮುನ್ನಡೆಸಲು 50 ಕೋಟಿ ರೂ ಅನುದಾನ ಕೊಟ್ಟಿದೆ. ಹೊಸ ಕಾರ್ಖಾನೆ ಅನಿವಾರ್ಯತೆ ಬಂದರೆ ಎಲ್ಲರ ಅಭಿಪ್ರಾಯ ಕೇಳಲಾಗುವುದು. ಕಾರ್ಖಾನೆಯ ಹಿಂದಿನ ಹಗರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಸೂಕ್ತ ಕ್ರಮ ಆಗಲಿದೆ ಎಂದರು.

ಜೂನ್‌ನಿಂದ ಕಬ್ಬು ಅರೆಯುವಿಕೆ: ಕಾರ್ಖಾನೆಯ 2024-25ನೇ ಸಾಲಿನ ಕಬ್ಬು ನುರಿಸುವಿಕೆಯನ್ನು ಜೂನ್ ಮಾಹೆಯಿಂದ ಪ್ರಾರಂಭಿಸಲಾಗುವುದು. ಈಗಾಗಲೇ 1,55,000 ಮೆಟ್ರಿಕ್ ಟನ್ ಕಬ್ಬನ್ನು ನುರಿಸಲು ರೈತರ ಜತೆ ಒಪ್ಪಂದವಾಗಿದೆ. ಜೂನ್‌ನಿಂದ 4 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ನುರಿಸಲು ಗುರಿ ಹೊಂದಲಾಗಿದೆ ಎಂದು ವಿವರಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, 2023-24 ನೇ ಸಾಲಿನಲ್ಲಿ 2,41,305 ಮೆಟ್ರಿಕ್ ಟನ್ ಕಬ್ಬನ್ನು ನುರಿಸಿ 1,67,926 ಕ್ವಿಂಟಾಲ್ ಸಕ್ಕರೆ ಉತ್ಪಾದನೆಯಾಗಿದೆ. 15,741.20 ಮೆಟ್ರಿಕ್ ಟನ್ ಕಾಕಂಬಿ, 6,450 ಮೆಟ್ರಿಕ್ ಟನ್ ಪ್ರೆಸ್‌ಮಡ್ಡಿ ಮತ್ತು 68,680 ಮೆಟ್ರಿಕ್ ಟನ್ ಬಗಾಸ್ ಉತ್ಪಾದನೆಯಾಗಿರುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net