ಟೋಲ್​ಗಳಲ್ಲಿ ಸ್ಥಳಿಯರಿಗೆ ವಿನಾಯಿತಿ: ಜಿಲ್ಲಾಧಿಕಾರಿ ಸೂಚನೆ

udp-4-dc
Published on

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ, ಸಾಸ್ತಾನ ಹಾಗೂ ಶಿರೂರಿನ ಟೋಲ್​ಗಳ ಸಮೀಪ ವ್ಯಾಪ್ತಿಯಲ್ಲಿ ವಾಸವಿರುವ ಸ್ಥಳಿಯರಿಗೆ ದೈನಂದಿನ ಕಾರ್ಯಚಟುವಟಿಕೆಗಳಿಗೆ ದಿನದಲ್ಲಿ ಐದಾರು ಬಾರಿ ಟೋಲ್​ನಲ್ಲಿ ಹಾದುಹೋಗುವಾಗ ಪ್ರತಿಬಾರಿಯೂ ಶುಲ್ಕ ಪಾವತಿ ಮಾಡಲು ಅನಾನುಕೂಲತೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳಿಯ ವ್ಯಾಪ್ತಿಯಲ್ಲಿ ವಾಸಿಸುವ ಸಾರ್ವಜನಿಕರ ವಾಹನಗಳಿಗೆ ಈ ಹಿಂದಿನಂತೆ ವಿನಾಯಿತಿ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ರಾ.ಹೆ. ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಗುರುವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಟೋಲ್​ ಶುಲ್ಕ ವಸೂಲಾತಿ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಸ್ತೆಯಲ್ಲಿನ ಅವೈಜ್ಞಾನಿಕ ಕೆಲಸ ಕಾರ್ಯಗಳು ಸೇರಿದಂತೆ ಮತ್ತಿತರ ಸಮಸ್ಯೆಗಳಿಂದ ರಸ್ತೆ ಅಪಘಾತ ಹೆಚ್ಚಾಗುತ್ತಿದೆ. ಅಗತ್ಯವಿರುವ ಕಡೆ ಸರ್ವೀಸ್​ ರಸ್ತೆ, ರಸ್ತೆ ರಿಫ್ಲೆಕ್ಟರ್​ಗಳ ಅಳವಡಿಕೆ, ದಾರಿದೀಪ ಅಳವಡಿಕೆ, ರಸ್ತೆಯಲ್ಲಿ ಹೊಂಡ ದುರಸ್ತಿ, ಜಂಕ್ಷನ್​ಗಳಲ್ಲಿ ಸೂಚನಾ ಫಲಕ ಅಳವಡಿಸುವುದು ಸೇರಿದಂತೆ ಮತ್ತಿತರ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದರು. ರಾಷ್ಟ್ರೀಯ ಹೆದ್ದಾರಿಯ ಕೆಲವೆಡೆ ಸರ್ವೀಸ್​ ರಸ್ತೆಗಳನ್ನು ನಿಮಾರ್ಣ ಮಾಡಲು ಅನುಮತಿ ದೊರಕಿದ್ದು, ಇವುಗಳ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪ್ರಾರಂಭಿಸಬೇಕು. ಅವಶ್ಯವಿರುವ ಇತರೆ ಸ್ಥಳಗಳಲ್ಲಿ ಸರ್ವೀಸ್​ ರಸ್ತೆ ಹಾಗೂ ಮೇಲ್ಸೆತುವೆ ನಿಮಾರ್ಣಕ್ಕೆ ಅನುಮತಿ ಪಡೆದು ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.

ಹೆಣ್ಣು ಮಕ್ಕಳ ವಿಶ್ರಾಂತಿ ಕೊಠಡಿ ಅಗತ್ಯ
ಕೆಲವು ಟೋಲ್​ ಸಮೀಪದಲ್ಲಿ ಹೋಟೆಲ್​ಗಳು ಮತ್ತು ಅಂಗಡಿಗಳು ಇರುವುದರಿಂದ ವಾಹನಗಳು ರಸ್ತೆಯಲ್ಲಿ ಪಾರ್ಕ್​ ಮಾಡಿದ ಸಂದರ್ಭದಲ್ಲಿ ಅಪಘಾತಗಳು ಉಂಟಾಗುವ ಸಾಧ್ಯತೆ ಇವೆ. ಇವುಗಳ ತೆರವಿಗೆ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು. ಟೋಲ್​ ಸಮೀಪದಲ್ಲಿ ಹೆಣ್ಣು ಮಕ್ಕಳ ವಿಶ್ರಾಂತಿ ಕೊಠಡಿ, ಶೌಚಾಲಯದ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಮತ್ತಿತರ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಜಂಕ್ಷನ್​ಗಳಲ್ಲಿ ಸಿ.ಸಿ.ಟಿವಿ ಆಳವಡಿಸುವಂತೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್​, ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮದ್​ ಅಜ್ಮಿ, ಉಡುಪಿ ತಹಶೀಲ್ದಾರ್​ ಹರೀಶ್​ ಹಾಗೂ ಕಾಪು ತಹಶೀಲ್ದಾರ್​ ಪ್ರತಿಭಾ ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ದಿನೇದಿನೇ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಈ ವರ್ಷ 250 ಕ್ಕೂ ಹೆಚ್ಚು ಮರಣ ಸಂಭವಿಸಿವೆ. ಇವುಗಳಲ್ಲಿ 200 ಮರಣಾಂತಿಕ ಅಪಘಾತಗಳು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಆಗಿವೆ. ಇವುಗಳ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಮಳೆಯ ನೀರು ಸರಾಗವಾಗಿ ಹರಿದು ಹೋಗದೇ ರಸ್ತೆಯ ಮೇಲೆ ನಿಂತು ಅಪಘಾತಕ್ಕೆ ಆಹ್ವಾನ ನೀಡುತ್ತಿವೆ. ಅಪಘಾತವಾದ ಸಂದರ್ಭದಲ್ಲಿ ರಸ್ತೆಯ ಮೇಲಿನ ವಾಹನಗಳನ್ನು ತೆರವುಗೊಳಿಸಲು ಕೆನ್​ ಕಾಯ್ದಿರಿಸಬೇಕು. ಟೋಲ್​ಗಳ ಬಳಿ ಗುತ್ತಿಗೆ ಅವಧಿಯನ್ನು ಪ್ರದರ್ಶಿಸಬೇಕು.ಡಾ. ಅರುಣ್​ ಕೆ.ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net