ಸಾರ್ವಜನಿಕ ಸ್ಮಶಾನದಲ್ಲಿ ಮುಕ್ತ ಅವಕಾಶ: ಅಂತ್ಯಕ್ರಿಯೆ, ಓಡಾಡಲು ತೊಂದರೆ ಕೊಟ್ಟರೆ ಶಿಸ್ತು ಕ್ರಮ

Dc Meeting mandya
Published on

ಮಂಡ್ಯ: ಜಿಲ್ಲೆಯ ಗ್ರಾಮ ಪಂಚಾಯಿತಿಯಲ್ಲಿರುವ ಸ್ಮಶಾನಗಳ ಮುಂದೆ ಸಾರ್ವಜನಿಕ ಸ್ಮಶಾನವೆಂದು ನಾಮಫಲಕ ಅಳವಡಿಸಬೇಕು. ಅಲ್ಲಿ ಯಾವುದೇ ಜಾತಿ, ಮತದ ಬೇಧವಿಲ್ಲದೇ ಎಲ್ಲರಿಗೂ ಮುಕ್ತ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು,

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಮ್ಯಾನ್ಯುಯಲ್ ಸ್ಕಾೃವೆಂಜರ್‌ಗಳ ವೃತ್ತಿ ನಿಷೇಧ ಮತ್ತು ಅವರ ಪುನರ್ ವಸತಿ ಕಾಯ್ದೆ ಸಂಬಂಧ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳು ಎಂದು ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲು, ಓಡಾಡಲು ರಸ್ತೆಯಲ್ಲಿ ಅವಕಾಶ ನೀಡುವುದಿಲ್ಲ ಎಂದು ದೂರುಗಳು ಕೇಳಿಬರುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಿದರು.

ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಚರ್ಚಿಸಲಾಗುವ ವಿಷಯಗಳ ಬಗ್ಗೆ ಸಂಬಂಧಿಸಿದ ಕಚೇರಿಯೊಂದಿಗೆ ಸಮನ್ವಯ ಸಾಧಿಸಿ ಮುಂದಿನ ಸಭೆಯೊಳಗೆ ಸಮಸ್ಯೆಗಳು ಪರಿಹಾರವಾಗಬೇಕು. ವರ್ಷಾನುಗಟ್ಟಲೇ ಒಂದೇ ಸಮಸ್ಯೆ ಸಭೆಯಲ್ಲಿ ಚರ್ಚಿಸಿದರೆ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂಬ ಅಭಿಪ್ರಾಯ ಮೂಡುತ್ತದೆ. ಶ್ರೀರಂಗಪಟ್ಟಣ ಟೌನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ನಿವೇಶನ ಕಲ್ಪಿಸಲು ಮೊದಲು ತಹಸೀಲ್ದಾರ್ ಕಚೇರಿ ಅವರು ಸರ್ಕಾರಿ ಸ್ಥಳ ಲಭ್ಯತೆಯ ಬಗ್ಗೆ ಪರಿಶೀಲಿಸಬೇಕು. ಒಂದು ವೇಳೆ ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಜಮೀನು ಲಭ್ಯತೆಯನ್ನು ಗುರುತಿಸಿ ಖರೀದಿಗಾಗಿ ಪ್ರಸ್ತಾವನೆ ಸಲ್ಲಿಸಿ ಎಂದು ತಿಳಿಸಿದರು.

ಅರಿವು ಕಾರ್ಯಕ್ರಮ ಆಯೋಜಿಸಿ ಮ್ಯಾನುಯಲ್ ಸ್ಕಾೃವೆಂಜರ್‌ಗಳ ವೃತ್ತಿ ನಿಷೇಧ ಸಂಬಂಧ ಗುರುತಿಸಲಾದ ಮ್ಯಾನುಯಲ್ ಸ್ಕಾೃವೆಂಜರ್‌ಗಳಿಗೆ ಸರ್ಕಾರದಿಂದ ಸೌಲಭ್ಯಗಳ ಬಗ್ಗೆ ತಾಲೂಕುವಾರು ಅರಿವು ಕಾರ್ಯಕ್ರಮ ನಡೆಸಿ, ಅವರಿಗೆ ಸೌಲಭ್ಯ ಒದಗಿಸಿ ಮುಖ್ಯವಾಹಿನಿಗೆ ತರಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪೌರ ಕಾರ್ಮಿಕರಿಗೆ ನೀಡಲಾಗುವ ಸಾಲ ಯೋಜನೆಗಳಿಗೆ ಸಿವಿಲ್ ಸ್ಕೋರ್ ಇಲ್ಲವೆಂದು ಬ್ಯಾಂಕ್‌ನಲ್ಲಿ ಸಾಲ ನೀಡದಿರುವ ಪ್ರಕರಣಗಳಿದ್ದರೆ ಅವುಗಳ ಬಗ್ಗೆ ಲೀಡ್ ಬ್ಯಾಂಕಿಗೆ ಪತ್ರ ಬರೆದು ಪರಿಹರಿಸಲಾಗುವುದು ಎಂದರು.

ದಲಿತ ಸಮುದಾಯದ ಮುಖಂಡರಾದ ನಂಜುಂಡ ಮೌರ್ಯ ಹಾಗೂ ಆರ್.ಕೃಷ್ಣ ಅವರು ಸಫಾಯಿ ಕರ್ಮಚಾರಿಗಳಿಗೆ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಿದ್ದಲಿಂಗೇಶ್, ಉಪವಿಭಾಗಾಧಿಕಾರಿಗಳಾದ ಶಿವಮೂರ್ತಿ, ನಂದೀಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷರಾಮಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net