ರಸಗೊಬ್ಬರದ ಕೊರತೆ ಇಲ್ಲ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

Meeting regarding Agriculture Department Mandya
Published on

ಮಂಡ್ಯ: ಜಿಲ್ಲೆಯಲ್ಲಿ 25 ಸಾವಿರಕ್ಕೂ ಹೆಚ್ಚು ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದೆ. ಆದ್ದರಿಂದ ರಸಗೊಬ್ಬರ ಕೊರತೆ ಇಲ್ಲ. ರೈತರು ನಿರಾತಂಕವಾಗಿ ಕೃಷಿ ಕೆಲಸಗಳನ್ನು ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 5,700 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ಲಭ್ಯವಿದೆ. ಈಗಾಗಲೇ ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ ತಾಲೂಕಿನಲ್ಲಿ ನಾಟಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಭಾಗದಲ್ಲೂ ನಾಟಿ ಕೆಲಸ ಶುರುವಾಗುವ ಹಿನ್ನೆಲೆಯಲ್ಲಿ ಅಧಿಕಾರಿಗಳು ರೈತರಿಗೆ ಯೂರಿಯಾ ಬದಲು ಎನಪಿಕೆ ಕಾಂಪ್ಲೆಕ್ಸ್ ಬಳಸುವಂತೆ ಜಾಗೃತಿ ಮೂಡಿಸಿ ಎಂದರು.

ರಸಗೊಬ್ಬರ ಮಾರಾಟಗಾರೊಂದಿಗೆ ಹೋಬಳಿ ಮಟ್ಟದ ಸಭೆ ನಡೆಸಿ, ಸೊಸೈಟಿಗಳಲ್ಲಿ ರಸಗೊಬ್ಬರ ದಾಸ್ತಾನಿನ ಪ್ರಮಾಣ ಹಾಗೂ ದರವನ್ನು ಕಡ್ಡಾಯವಾಗಿ ನಮೂದಿಸಬೇಕು. ಯೂರಿಯಾ ಅತಿಯಾದ ಬಳಕೆಯಿಂದ ಬೆಳೆಯ ಗುಣಮಟ್ಟ ಕಡಿಮೆಯಾಗುವುದರ ಕುರಿತು ಮಾಹಿತಿ ನೀಡಿ ಜಾಗೃತಿ ಮೂಡಿಸಿ. ಪಿಒಎಸ್ ಆನ್‌ಲೈನ್‌ನಲ್ಲಿ ಭರ್ತಿ ಮಾಡುವ ಹಾಗೂ ಲಭ್ಯವಿರುವ ಭೌತಿಕ ದಾಸ್ತಾನಿಗೂ ತಾಳೆ ಇರಬೇಕು. ಸಂಬಂಧಪಟ್ಟ ಅಧಿಕಾರಿಗಳು ನಿರಂತರ ಪರೀಶೀಲನೆ ನಡೆಸಬೇಕು. ಕೃತಕವಾಗಿ ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆಯ ಸನ್ನಿವೇಶ ಸೃಷ್ಠಿಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ತಿಳಿಸಿದರು.

ರಸಗೊಬ್ಬರವನ್ನು ಅನಧಿಕೃತವಾಗಿ ಮಾರಾಟ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜತೆಗೆ ಪರವಾನಿಗೆ ರದ್ದು ಪಡಿಸಬೇಕು. ರಸಗೊಬ್ಬರ ದಾಸ್ತಾನು ಹಾಗೂ ಮಾರಾಟ ಮಳಿಗೆಯನ್ನು ಸಮರ್ಪಕವಾಗಿ ನಿರ್ವಹಿಸುವ ಬಗ್ಗೆ ನಿಗಾ ವಹಿಸಲು ಈಗಾಗಲೇ ತಂಡಗಳನ್ನು ರಚಿಸಲಾಗಿದೆ. ಆ ತಂಡಗಳು ರಸಗೊಬ್ಬರ ದಾಸ್ತಾನು ಹಾಗೂ ಮಾರಾಟ ಮಳಿಗೆಗಳಿಗೆ ನಿಗಧಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.

ಮೇವು ವೇಗವಾಗಿ ಬೆಳೆಯಲು ರೈತರು ಹೆಚ್ಚು ಯೂರಿಯಾ ಬಳಸುತ್ತಾರೆ. ಮೇವು ವೇಗವಾಗಿ ಬೆಳೆದರೂ ಅದರಲ್ಲಿ ಪೌಷ್ಟಿಕಾಂಶಗಳ ಕೊರತೆ ಇರುತ್ತದೆ. ಪರಿಣಾಮ ಹಾಲಿನ ಗುಣಮಟ್ಟದ ಪ್ರಮಾಣ ಕಡಿಮೆಯಾಗುತ್ತದೆ. ಇದರ ಕುರಿತಾಗಿ ರೈತರಿಗೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಆದ್ದರಿಂದ ಯೂರಿಯಾ ಬದಲು ನ್ಯಾನೋ ಯೂರಿಯಾ ಬಳಸಬೇಕು. ಜಿಲ್ಲೆಯಲ್ಲಿರುವ 31 ಸಾವಿರ ರೇಷ್ಮೆ ಬೆಳೆಗಾರರು ಯೂರಿಯಾ ಬಳೆಕೆಯನ್ನು ಹೆಚ್ಚು ಮಾಡುವುದರಿಂದ ರೇಷ್ಮೆ ನೂಲು ತನ್ನ ದೃಢತೆಯನ್ನು ಕಳೆದುಕೊಳ್ಳುತ್ತದೆ ಎಂಬುದರ ಕುರಿತಾಗಿ ಅರಿವು ಮೂಡಿಸಬೇಕು. ಇದಲ್ಲದೆ ರೈತರು ನಾಟಿ ಸಂದರ್ಭದಲ್ಲಿ ಹೆಚ್ಚಾಗಿ ಯೂರಿಯಾ ಬಳಕೆ ಮಾಡುವುದರಿಂದ ಬೆಳೆಯ ಗುಣಮಟ್ಟ ಕುಂದುತ್ತದೆ. ಆದ್ದರಿಂದ ನಾಟಿ ಸಂದರ್ಭದಲ್ಲಿ ಕಾಂಪ್ಲೆಕ್ಸ್, ಹಸಿರೆಲೆ ಗೊಬ್ಬರ ಮತ್ತು ಸಾವಯವ ಗೊಬ್ಬರವನ್ನು ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ಅಗತ್ಯಕ್ಕಿಂತ ಹೆಚ್ಚಾಗಿ ಯೂರಿಯಾವನ್ನು ರೈತರು ಬಳಕೆ ಮಾಡುತ್ತಿದ್ದಾರೆ. ಇದರಿಂದ ಬೆಳೆಗಳು ಗುಣಮಟ್ಟ ಕಮ್ಮಿಯಾಗುತ್ತದೆ. ಆದ್ದರಿಂದ ಯೂರಿಯಾ ಬದಲು ಕಾಂಪ್ಲೆಕ್ಸ್ ಬಳಸಿ. ಜಿಲ್ಲೆಗೆ 6 ಸಾವಿರಕ್ಕೂ ಹೆಚ್ಚು ಮೆಟ್ರಿಕ್ ಟನ್ ಬಿತ್ತನೆ ಬೀಜದ ಅಗತ್ಯವಿದೆ. ಪ್ರಸ್ತುತ ಜಿಲ್ಲೆಯಲ್ಲಿ ಬಿತ್ತನೆ ಬೀಜದ ದಾಸ್ತಾನು ಇದ್ದು, ಯಾವುದೇ ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ದಿನೇಶ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ರೂಪಶ್ರೀ, ಕೃಷಿ ಇಲಾಖೆ ಉಪನಿರ್ದೇಶಕ ಮುನೇಗೌಡ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net