ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಗೆ ಕ್ರಮ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

Meeting organized regarding the problems of slum areas Mandya
Published on

ಮಂಡ್ಯ: ನಗರದ ಆರ್‌ಟಿಒ ಕಚೇರಿ ಮುಂಭಾಗದ ಕಾಳಪ್ಪ ಬಡಾವಣೆಯಲ್ಲಿ 65 ವಸತಿ ರಹಿತ ನಿವಾಸಿಗಳಿಗೆ ಹಕ್ಕು ಪತ್ರ ತಯಾರಾಗಿದ್ದು, ಅವರಿಗೆ ಮಂಡ್ಯ ಶಾಸಕ ರವಿಕುಮಾರ್ ಗಣಿಗ ನೇತೃತ್ವದಲ್ಲಿ ಹಕ್ಕುಪತ್ರ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಡ್ಯ ನಗರದ ಕೊಳಚೆ ಪ್ರದೇಶಗಳ ಸಮಸ್ಯೆಗಳ ಸಂಬಂಧ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನ್ಯೂ ತಮಿಳು ಕಾಲನಿ ಸರ್ವೆ ನಂಬರ್ 3 ರಲ್ಲಿ 1 ಎಕರೆ 39 ಗುಂಟೆ ಘೋಷಿತ ಕೊಳಚೆ ಪ್ರದೇಶದಲ್ಲಿ 169 ಕುಟುಂಬಕ್ಕೆ ಹಕ್ಕುಪತ್ರ ನೀಡಿದ್ದು, ಫಲಾನುಭವಿಗಳ ಹೆಸರಿಗೆ ಖಾತೆ ಮಾಡಬೇಕಾಗಿ ಸೂಚಿಸಿದರು.

ಹೊನ್ನಯ್ಯ ಬಡಾವಣೆಯಲ್ಲಿ 113 ಕುಟುಂಬಕ್ಕೆ ಹಕ್ಕುಪತ್ರ ನೀಡಿದ್ದು, ಫಲಾನುಭವಿಗಳ ಹೆಸರಿಗೆ ಖಾತೆಗಳನ್ನು ಮಾಡಲಾಗುತ್ತಿದೆ. ರೈಲ್ವೆ ಹಳಿ ಪಕ್ಕದ ಬೀದಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಹಾಗೂ 16 ಮನೆಯಲ್ಲಿ ಶೌಚಗೃಹ ನಿರ್ಮಿಸಲು ಪೈಪ್‌ಲೈನ್ ಕಾಮಗಾರಿ ಮಾಡಲು ಈ ಹಿಂದೆ ತಿಳಿಸಲಾಗಿತ್ತು. ಈ ಕಾಮಗಾರಿಯು ಟೆಂಡರ್ ಹಂತದಲ್ಲಿದ್ದು, ವಿಳಂಬ ಮಾಡದೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಸಂತೆಮಾಳ ಪಕ್ಕದ ಸ್ಲಾಟರ್ ಹೌಸ್ ಘೋಷಿತ ಸ್ಲಂ ಜಾಗದ ಪಕ್ಕದಲ್ಲಿ ವಾಸ ಮಾಡುತ್ತಿದ್ದ ವಸತಿ ರಹಿತ 6 ಫಲಾನುಭವಿಗಳಿಗೆ ನಿವೇಶನ ನೀಡಲು ಫಲಾನುಭವಿಗಳ ಪಟ್ಟಿಗೆ ಅನುಮೋದನೆ ನೀಡಲು ನಗರಾಶ್ರಯ ಸಮಿತಿಯೊಂದಿಗೆ ಚರ್ಚಿಸಲಾಗುವುದು. ಕಾಳಿಕಾಂಬ ದೇವಸ್ಥಾನದ ಹಿಂಭಾಗ ಕೊಳಚೆ ಪ್ರದೇಶದ ನಿವಾಸಿಗಳಿಗೆ ಅದೇ ಸ್ಥಳದಲ್ಲೇ 38 ಮನೆ ಮಂಜೂರು ಮಾಡಲಾಗಿದೆ. ಆ ಕೊಳಚೆ ಪ್ರದೇಶದಲ್ಲಿ ಮನೆಗಳ ನಿರ್ಮಾಣ ಕಾಮಗಾರಿಗೆ ತಡೆಯಾಜ್ಞೆ ಇದ್ದು, ನ್ಯಾಯಾಲಯದ ಅಂತಿಮ ತೀರ್ಪಿನಂತೆ ಮುಂದಿನ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಮಂಡ್ಯ ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದಾರ, ಮದ್ದೂರು ತಹಸೀಲ್ದಾರ್ ಡಾ.ಸ್ಮಿತಾರಾಮು, ನಗರಸಭೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವಿಕುಮಾರ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯಪಾಲಕ ಇಂಜಿನಿಯರ್ ಮಹಮ್ಮದ್ ಜಫ್ರುಲ್ಲಾ, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ಕುಮಾರ್, ಈಶ್ವರ, ನಾಗೇಂದ್ರ, ಮುಖಂಡ ಸಿದ್ದರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net