ಉಡುಪಿ ಜಿಲ್ಲೆಯಲ್ಲಿ ನೀರಿನ ಮೂಲಗಳ ಸಮೀಕ್ಷೆ...

DC Meeting
Published on

ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾಹಿತಿ

ಜೂನ್​ನಿಂದ ಅಕ್ಟೋಬರ್​ವರೆಗೆ ಗಣತಿ ಕಾರ್ಯ

ವಿಜಯವಾಣಿ ಸುದ್ದಿಜಾಲ ಉಡುಪಿ

ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದಿಂದ ನೀರಾವರಿ ನೀತಿ ರೂಪಿಸಲು 7ನೇ ಸಣ್ಣ ನೀರಾವರಿ ಗಣತಿ (ನೀರಿನ ಮೂಲಗಳ ಸಮೀಕ್ಷೆ) ಜೂನ್​ನಿಂದ ಅಕ್ಟೋಬರ್​ವರೆಗೆ ನಡೆಯಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ತಿಳಿಸಿದರು.

ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಜೂನ್​ 10ರಂದು ಆಯೋಜಿಸಿದ್ದ ಸಭೆಯಲ್ಲಿ 7ನೇ ಸಣ್ಣ ನೀರಾವರಿ ಗಣತಿ ಮತ್ತು ನೀರಿನ ಮೂಲಗಳ ಸಮೀಕ್ಷೆ ಕಾರ್ಯಗಳ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಈ ಕಾರ್ಯದಿಂದ ಪರಿಣಾಮಕಾರಿ ಯೋಜನೆ ಮತ್ತು ನೀತಿ ರೂಪಿಸಲು ಅನುಕೂಲವಾಗಿಲಿದೆ ಎಂದರು.

ಮಾಹಿತಿ ಸಂಗ್ರಹ

ಗಣತಿಯಲ್ಲಿ ನೈಸರ್ಗಿಕ ಹಾಗೂ ಮಾನವ ನಿರ್ಮಿತ ಎಲ್ಲ ನೀರಿನ ಆಸರೆಗಳ ಅಚ್ಚುಕಟ್ಟುಗಳ ಪ್ರಮಾಣ ಲೆಕ್ಕಿಸದೆ ಮಾಹಿತಿ ಸಂಗ್ರಹಿಸಲಾಗುವುದು. ಗ್ರಾಮ ಹಾಗೂ ನಗರ ಅಂತರ್ಜಲ ಯೋಜನೆಗಳಾದ ಅಗೆದ ಬಾವಿ, ವಿವಿಧ ಕೊಳವೆ ಬಾವಿಗಳ ಮಾಹಿತಿ, ಜಲ ಯೋಜನೆಗಳಾದ ಮೇಲ್ಮೆ ಹರಿವು ಹಾಗೂ ಏತ ನೀರಾವರಿ ಯೋಜನೆ ಒಳಗೊಂಡು ಮಾಹಿತಿ ಸಂಗ್ರಹಿಸಬೇಕು ಎಂದರು.

ತರಬೇತಿ ಆಯೋಜಿಸಿ

ನೀರಾವರಿ ಅಥವಾ ಇತರ ಉದ್ದೇಶಗಳಾದ ಕೈಗಾರಿಕೆ, ಮೀನುಗಾರಿಕೆ, ಕುಡಿಯುವ ನೀರು, ಆಟೋಟ ಮನೋರಂಜನೆ, ಧಾರ್ಮಿಕ ಅಂತರ್ಜಲ ಪುನ:ಶ್ಚೇತನ, ಕೃಷಿ ಹೊಂಡ ಮುಂತಾದೆಡೆ ಬಳಕೆಯಾಗುವ ಎಲ್ಲ ನೀರಿನ ಆಸರೆಗಳನ್ನೂ ಗಣತಿಯಲ್ಲಿ ಪರಿಗಣಿಸಲಾಗುವುದು. ಗಣತಿ ಅನುಷ್ಠಾನ ಕಾರ್ಯದಲ್ಲಿ ಭಾಗಿಯಾಗುವ ಗ್ರಾಮ ಲೆಕ್ಕಿಗರಿಗೆ ಹಾಗೂ ನಗರ, ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳಿಗೆ ಜಿಲ್ಲಾ ಹಾಗೂ ತಾಲೂಕು ಮಟ್ಟಗಳಲ್ಲಿ ಕಾರ್ಯಾಗಾರ ಏರ್ಪಡಿಸಿ ತರಬೇತಿ ನೀಡಬೇಕು ಎಂದು ಡಿಸಿ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ ಗದ್ಯಾಳ, ಸಹಾಯಕ ಕಮಿಷನರ್​ ರಶ್ಮಿ ಎಸ್​., ಮಂಗಳೂರು ಸಣ್ಣ ನೀರಾವರಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್​ ಅಲ್ವಿನ್​ ಅಗೇರ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ತಹಸೀಲ್ದಾರರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ 18,809 ಯೋಜನೆಗಳು

ಆರನೇ ಸಣ್ಣ ನೀರಾವರಿ ಗಣತಿ ದತ್ತಾಂಶದ ಅನ್ವಯ ಜಿಲ್ಲೆಯಲ್ಲಿ ಒಟ್ಟು 257 ಗ್ರಾಮಗಳಲ್ಲಿ 18,290 ಅಂತರ್ಜಲ ಯೋಜನೆ, 181 ಮೇಲ್ಮೆ ಜಲ ಹರಿಯುವ ಯೋಜನೆಗಳು ಮತ್ತು 338 ಏತ ನೀರಾವರಿ ಯೋಜನೆ ಸೇರಿ ಒಟ್ಟು 519 ಮೇಲ್ಮೆ ಜಲ ಯೋಜನೆಗಳಿದ್ದು, ಗಣತಿಯಲ್ಲಿ ಒಟ್ಟು 18,809 ಯೋಜನೆಗಳಿವೆ. ಪ್ರಸ್ತುತ ದಿನಗಳಲ್ಲಿ ಅಂತರ್ಜಲ ಯೋಜನೆಗಳೂ ಹೆಚ್ಚಾಗಿರಬಹುದಾದ ಸಾಧ್ಯತೆ ಇದೆಯೆಂದು ಡಿಸಿ ಮಾಹಿತಿ ನೀಡಿದರು. ತಾಲೂಕು ಮಟ್ಟದಲ್ಲಿ ತಹಸೀಲ್ದಾರರು, ಕಂದಾಯ ನಿರೀಕ್ಷಕರು ಹಾಗೂ ಸಾಂಖಿಕ ನಿರೀಕ್ಷಕರು ಗಣತಿ ಕಾರ್ಯದ ಮೇಲ್ವಿಚಾರಣೆ ಮಾಡಬೇಕು. ನಿಯಮಿತವಾಗಿ ಶೇ.10ರಷ್ಟು ಯೋಜನೆ ಆಯ್ಕೆ ಮಾಡಬೇಕು. ಭೌತಿಕವಾಗಿ ಸಂದರ್ಶಿಸಿ ಗುಣಮಟ್ಟ ಹಾಗೂ ವ್ಯಾಪ್ತಿಯ ನೈಜತೆ ಪರಿಶೀಲಿಸಬೇಕು. | ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net