

ಮಂಡ್ಯ: ಅಮೆರಿಕಾ ಕನ್ನಡ ಕೂಟಗಳ ಒಕ್ಕೂಟ(ಅಕ್ಕ)ದ ಬೆಳ್ಳಿ ಮಹೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ಹಾಗೂ ಆರೋಗ್ಯ ಜಾಗೃತಿ, ವನ್ಯ ಜೀವಿಗಳ ಸಂರಕ್ಷಣೆ ಸಂದೇಶ ಜನರಿಗೆ ತಲುಪಿಸುವ ಉದ್ದೇಶದಿಂದ ನಗರದಲ್ಲಿ ಅ.19ರಂದು ವಾಕಥಾನ್ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅ.19ರಂದು ಬೆಳಗ್ಗೆ 7 ಗಂಟೆಗೆ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ವಾಕಥಾನ್‌ಗೆ ಚಾಲನೆ ನೀಡಲಾಗುವುದು. ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಸೇರಿಸುವಂತೆ ಹಾಗೂ ನೋಂದಣಿಗಾಗಿ ಮೂರು ಕೌಂಟರ್ ಸ್ಥಾಪಿಸಿ ಸ್ವಯಂ ಸೇವಕರನ್ನು ನಿಯೋಜಿಸಲು ಅಗತ್ಯ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಕ್ಕ ಒಕ್ಕೂಟದ ಅಧ್ಯಕ್ಷ ಮಧು ರಂಗಯ್ಯ ಮಾತನಾಡಿ, ವಾಕಥಾನ್ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸುವರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಉಪಸ್ಧಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸುವರು. ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ತಿಳಿಸಿದರು.
ಅತಿಥಿಗಳಾಗಿ ಚಿತ್ರನಟ ನೆನಪಿರಲಿ ಪ್ರೇಮ್, ನಟಿಯರಾದ ಅಮೃತಾ ಪ್ರೇಮ್, ಸಾನ್ಯಾ ಅಯ್ಯರ್ ಭಾಗವಹಿಸುವರು. ವಾಕಥಾನ್‌ನಲ್ಲಿ ಭಾಗವಹಿಸುವವರ ನೋಂದಣಿ ಅಂದು ಬೆಳಗ್ಗೆ 6 ಗಂಟೆಗೆ ಆರಂಭವಾಗಲಿದೆ. ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಎಸ್.ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ, ಅಕ್ಕ ಒಕ್ಕೂಟದ ಬಸವರಾಜು, ಚಂದ್ರು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.