

ಮಂಡ್ಯ: ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ 5 ಸಾವಿರ ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡುವ ಗುರಿ ಹೊಂದಲಾಗಿದೆ. ಅಂತೆಯೇ ಈ ಬಾರಿ ಮಂಡ್ಯ ನಗರಸಭೆಯಲ್ಲಿ 60 ಲಕ್ಷ ರೂಗಳನ್ನು ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬೀದಿ ನಾಯಿಗಳ ಸಂತಾನ ನಿಯಂತ್ರಣ(ಎ.ಬಿ.ಸಿ ಮತ್ತು ಎ.ಆರ್.ವಿ) ಚಿಕಿತ್ಸೆ ನೀಡುವ ಸಂಬಂಧ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 21ನೇ ಜಾನುವಾರು ಗಣತಿಯನ್ವಯ 24,615 ಸಾಕು ಹಾಗೂ 51,531 ಬೀದಿ ನಾಯಿಗಳು ಸೇರಿ ಒಟ್ಟು 76,146 ನಾಯಿಗಳಿವೆ ಎಂದರು.
ಸ್ಥಳೀಯ ಸಂಸ್ಥೆಗಳು ತಮ್ಮ ಆಯವ್ಯಯದಲ್ಲಿ ಶೇ.2ರಷ್ಟು ಹಣವನ್ನು ಬೀದಿ ನಾಯಿಗಳಿಗೆ ಎ.ಬಿ.ಸಿ ಹಾಗೂ ಎ.ಆರ್.ವಿ ಚಿಕಿತ್ಸೆಗೆ ಮೀಸಲಿಡಲು ಅವಕಾಶವಿದೆ. ಪಶು ಸಂಗೋಪನೆ ಇಲಾಖೆ ಅವರು ನಗರ ಸ್ಥಳೀಯ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಹಣ ಮೀಸಲಿಡಲು ಕ್ರಮ ವಹಿಸಿ. ಬೀದಿ ನಾಯಿ ಅಥವಾ ನಾಯಿ ಕಡಿತಕ್ಕೆ ಒಳಗಾದರೆ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳ ಬೇಕು ಎಂಬ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ. ಪ್ರಾಣಿಗಳನ್ನು ಕೆಣಕುವ ಕೃತ್ಯಗಳನ್ನು ಮಾಡಬಾರದೆಂಬುದನ್ನು ಸಹ ತಿಳಿಸಿ. ನಾಯಿ ಕಡಿತಕ್ಕೆ ಒಳಗಾಗಿರುವವರ ಅಂಕಿ ಅಂಶಗಳು ಸರಿಯಾಗಿ ತಾಳೆಯಾಗುತ್ತಿಲ್ಲ. ಕಡಿತಕ್ಕೆ ಒಳಗಾಗಿರುವವರಿಗೆ ನೀಡಲಾಗುವ ಡೋಸ್ ಹಾಗೂ ವ್ಯಕ್ತಿಗಳ ಸಂಖ್ಯೆಯನ್ನು ತಾಳೆ ಮಾಡಿ ವರದಿ ನೀಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
2023-24ನೇ ಸಾಲಿನಲ್ಲಿ ಜಿಲ್ಲೆಯ ಬರ ಪರಿಸ್ಥಿಯಲ್ಲಿ ಜಾನುವಾರುಗಳಿಗೆ ಮೇವು ಒದಗಿಸಲು ಮುಂಜಾಗ್ರತ ಕ್ರಮವಾಗಿ ಖರೀದಿಸಲಾಗಿತ್ತು. ಆದರೆ ಒಂದು ವರ್ಷ ಕಳೆದಿರುವುದರಿಂದ ಒಣ ಮೇವು ಹಾಳಾಗುವು ಸಂಭವವಿರುವುದರಿಂದ ಈ ಕುರಿತಂತೆ ಪ್ರಕಟಣೆ ನೀಡಿ ರೈತರಿಗೆ ಖರೀದಿಸಲು ಅವಕಾಶ ಕಲ್ಪಿಸಿಕೊಡಿ ಎಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಹೆಚ್ಚು ಬೀದಿ ನಾಯಿಗಳು ಇರುವ ಸ್ಥಳಗಳನ್ನು ಗುರುತಿಸಿ. ಆ ವ್ಯಾಪ್ತಿಯ ಗ್ರಾಮ ಪಂಚಾಯಿತಿಯ ಆಯ ವ್ಯಯದಲ್ಲಿ ಎ.ಬಿ.ಸಿ ಹಾಗೂ ಎ.ಆರ್.ವಿ ಚಿಕಿತ್ಸೆಗೆ ಹಣ ಮೀಸಲಿದೆ. ತಾಲೂಕು ಪಂಚಾಯಿತಿ ಇಒಗಳು ಈ ಕುರಿತಂತೆ ಯೋಜನೆ ರೂಪಿಸಿ. ಕಸಾಯಿ ಖಾನೆ, ಪ್ರವಾಸಿ ಸ್ಥಳಗಳು, ಆರತಿ ಉಕ್ಕಡ, ಆದಿಚುಂಚನಗಿರಿ ಸೇರಿದಂತೆ ಬೀದಿ ನಾಯಿಗಳಿಗೆ ಹೆಚ್ಚು ಆಹಾರ ಸಿಗುವ ಸ್ಥಳ ಗುರುತಿಸಿ. ಬೀದಿ ನಾಯಿಗಳು ಹೆಚ್ಚಿರುವ ಸ್ಥಳಗಳಲ್ಲಿ ಎ.ಬಿ.ಸಿ ಹಾಗೂ ಎ.ಆರ್.ವಿ ಚಿಕಿತ್ಸೆಗೆ ಆದ್ಯತೆ ನೀಡಿ ಕ್ರಮ ಕೈಗೊಳ್ಳಿ ಎಂದರು.
ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ.ಶಿವಲಿಂಗಯ್ಯ, ಪಶುವೈದ್ಯ ಡಾ.ಪ್ರವೀಣ್ ಇತರರಿದ್ದರು.