

ಮಂಡ್ಯ: ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಜಿಲ್ಲೆಯಲ್ಲಿ ಅ.7ವರೆಗೆ ಹಮ್ಮಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆಯನ್ನು ಪರಿಣಾಮಕಾರಿಯಾಗಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಮುದಾಯ ಮುಖಂಡರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಮನವಿ ಮಾಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಸಮುದಾಯ ಮುಖಂಡರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ನಾಗರಿಕರ ಸ್ಥಿತಿ ಗತಿ, ಅಗತ್ಯತೆ, ಬೇಡಿಕೆ ತಿಳಿಯಲು ಹಾಗೂ ಅವರ ಪರವಾಗಿ ಯೋಜನೆ ರೂಪಿಸಲು ಅಂಕಿ ಅಂಶ ಸಂಗ್ರಹಿಸುವ ಸಲುವಾಗಿ ಸಮೀಕ್ಷೆ ಕೈಗೊಳ್ಳಲಾಗಿದೆ. ಸಾಧ್ಯವಾದಷ್ಟು ಸಮೀಕ್ಷೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿ ಎಂದರು.
ಒಂದು ಕುಟುಂಬ ಮತ್ತು ವ್ಯಕ್ತಿಯ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಇದಾಗಿದೆ. ಇಲ್ಲಿ ಕೆಲ ವೈಯಕ್ತಿಕ ಹಾಗೂ ಕುಟುಂಬ ಮಾಹಿತಿ ಸಂಗ್ರಹಿಸಲಾಗುವುದು. ಗಣತಿದಾರರು ಮನೆ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಧನಾತ್ಮಕವಾಗಿ ಸಹಕರಿಸಲು ಜನರಲ್ಲಿ ತಿಳಿಸಿ. ಈಗಾಗಲೇ ಆಶಾ ಕಾರ್ಯಕರ್ತೆಯರು, ಸ್ಥಳೀಯ ಸಂಸ್ಥೆಗಳ ಕಸ ವಿಲೇವಾರಿ ವಾಹನಗಳಲ್ಲಿ ಜಿಂಗಲ್ಸ್ ಮತ್ತು ಬ್ಯಾನರ್ ಅಳವಡಿಸುವ ಮೂಲಕ ಸಮೀಕ್ಷೆ ಕುರಿತು ಪ್ರಚಾರ ಕೈಗೊಂಡಿದ್ದು, ಅರಿವು ಮತ್ತು ಜಾಗೃತಿ ಮೂಡಿಸಲು ಸಮುದಾಯದ ಮುಖ್ಯಸ್ಥರ ಪಾತ್ರವು ದೊಡ್ಡದಿದೆ. ಸಮೀಕ್ಷೆ ಕುರಿತು ಹೆಚ್ಚು ಪ್ರಚಾರ ಪಡಿಸಿ ಎಂದು ಹೇಳಿದರು.
ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಈಗಾಗಲೇ ಗಣತಿದಾರರಿಗೆ ಸಮೀಕ್ಷೆಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗಿದೆ. ಗಣತಿದಾರರು ತರಬೇತಿಯಲ್ಲಿ ನೀಡಲಾಗಿರುವ ಮಾರ್ಗದರ್ಶದಂತೆ ಸಮೀಕ್ಷೆ ನಡೆಸಲಿದ್ದಾರೆ. ಸಮಯ ಕಡಿಮೆಯಿದ್ದು, ಸಾರ್ವಜನಿಕರಿಗೆ ಸಮೀಕ್ಷೆ ಕುರಿತು ಮಾಹಿತಿ ನೀಡುವುದು ಹಾಗೂ ಜಾಗೃತಿ ಮೂಡಿಸುವುದು ಅಗತ್ಯವಿದೆ. ಸಮೀಕ್ಷೆ ಯಶಸ್ವಿಗೊಳಿಸಲು ಜನರಲ್ಲಿ ಜಾಗೃತಿ ಮೂಡಿಸಿ ಸಹಕರಿಸಿ ಎಂದರು.
ದಸರಾ ಮತ್ತು ಇತರೆ ಹಬ್ಬಗಳ ಆಚರಣೆ ಸಮಯವಾದ್ದರಿಂದ ಹಾಗೂ ರಜೆ ಇರುವುದರಿಂದ ಸಮೀಕ್ಷೆ ಸಂದರ್ಭದಲ್ಲಿ ಕುಟುಂಬಸ್ಥರಿಗೆ ಅವರ ಮನೆಯಲ್ಲಿ ಇರುವಂತೆ ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ತಲುಪಿಸಿರುವ ಪ್ರಶ್ನಾವಳಿಯ ಬಗ್ಗೆ ಮಾಹಿತಿ ಹೊಂದಿರಲು ಸಾರ್ವಜನಿಕರಿಗೆ ತಿಳಿಸಿ ಎಂದು ಸಲಹೆ ನೀಡಿದರು.
ಸಮುದಾಯದ ಮುಖಂಡರು ಮಾತನಾಡಿ, ಸಮೀಕ್ಷೆಯ ದಿನವನ್ನು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ತಿಳಿಸಿದರೆ ಕುಟುಂಬದ ಸದಸ್ಯರು ಮನೆಯಲ್ಲಿರಲು ಸಹಕಾರಿಯಾಗುತ್ತದೆ. ಗಣತಿದಾರರು ಸಂಪೂರ್ಣ ಪ್ರಶ್ನೆ ಕೇಳುವುದಿಲ್ಲ. ಪ್ರಶ್ನಾವಳಿಯಲ್ಲಿರುವ ಎಲ್ಲ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಲು ಹಾಗೂ ಸಾರ್ವಜನಿಕರೊಂದಿಗೆ ಸ್ನೇಹದಿಂದ ವರ್ತಿಸಲು ತಿಳಿಸಿ. ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಹಳ್ಳಿಗಳಲ್ಲಿ ಸಂಪ್ರದಾಯದಂತೆ ಟಾಂಟಾಂ ಮೂಲಕ ಸಮೀಕ್ಷೆ ಕುರಿತು ಪ್ರಚಾರ ನೀಡಿ. ಸಮೀಕ್ಷೆಯ ದಿನದಂದು ಕುಟುಂಬಸ್ಥರು ಮನೆಯಲ್ಲಿರುವಂತೆ ಹೇಳಲು ತಿಳಿಸಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಂಜುಳಾ ಸೇರಿದಂತೆ ವಿವಿಧ ಸಮುದಾಯದ ಮುಖಂಡರು, ಪದಾಧಿಕಾರಿಗಳು ಹಾಜರಿದ್ದರು.